ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟ ಜಾಲದ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಹೊಂದಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಬಂಧಿತರಿಂದ ಸುಮಾರು 4.90 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, ಸಾಗಾಟಕ್ಕೆ ಬಳಸಿದ್ದ ವಾಹನ ಹಾಗೂ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಮಂಗಳೂರಿನ ಅಡ್ಯಾರ್ ನಿವಾಸಿ ನಾಸಿರ್ ಹುಸೇನ್ (37), ಕಂಕನಾಡಿಯ ಅಫ್ರಿದಿ (24) ಮತ್ತು ಬಂಟ್ವಾಳ ಗೋಳ್ತಮಜಲಿನ ಜುನೈದ್ (38) ಎಂದು ಗುರುತಿಸಲಾಗಿದೆ. ಕಾವಳಪಡೂರು ಪ್ರದೇಶದಲ್ಲಿ ಮಾದಕ ದ್ರವ್ಯ ಜಾಲ ಸಕ್ರಿಯವಾಗಿರುವ ಕುರಿತು ಲಭಿಸಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ ಸುಮಾರು 2.25 ಲಕ್ಷ ರೂಪಾಯಿ ಮೌಲ್ಯದ 22.57 ಗ್ರಾಂ ಎಂಡಿಎಂಎ, 30.34 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು ಹಾಗೂ 5 ಮೊಬೈಲ್ ಫೋನ್ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಅಕ್ರಮ ಚಟುವಟಿಕೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾನೂನು ರೀತ್ಯ ಪ್ರಕರಣ ದಾಖಲಾಗಿದ್ದು, ಜಾಲದ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ. ಈ ಯಶಸ್ವಿ ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಪಿಎಸ್ಐ ರನ್ನಗೌಡ ಎಸ್.ಪಾಟೀಲ್, ಪ್ರೊಬೇಷನರಿ ಪಿಎಸ್ಐಗಳಾದ ಶಿವರಾಮ ಹಾಗೂ ಫಕೀರಪ್ಪ, ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ ಕೆ, ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ವಿವೇಕ ರೈ, ಕುಮಾರ್, ಬಸವರಾಜ್, ಶ್ರೀಧರ್, ಧನ್ಯಶ್ರೀ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









