ಉಡುಪಿ : ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ಈ ಬಾರಿಯ ‘ಜಗದೊಡೆಯನ ಜನ್ಮಾಷ್ಟಮಿ’ ಸಂಭ್ರಮವು ಆಗಸ್ಟ್ 29ರಿಂದ ಸೆಪ್ಟೆಂಬರ್ 6ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಈ ಕುರಿತು ರಥಬೀದಿಯ ಶಿರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 4ರಂದು ಮಧ್ಯರಾತ್ರಿ 12:12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನೆರವೇರಲಿದ್ದು, ಸೆಪ್ಟೆಂಬರ್ 5ರಂದು ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಅಪರಾಹ್ನ 3:30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆಯೊಂದಿಗೆ ವೈಭವದ ‘ವಿಟ್ಲಪಿಂಡಿ’ ಲೀಲೋತ್ಸವ ನಡೆಯಲಿದೆ.
ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಸೆಪ್ಟೆಂಬರ್ 5ರಂದು ರಥಬೀದಿಯ ವಿಶೇಷ ವೇದಿಕೆಯಲ್ಲಿ ಮೊದಲ ಬಾರಿಗೆ ಮೈಸೂರು, ಮಂಡ್ಯ ಹಾಗೂ ಮಂಗಳೂರಿನ ಆಹ್ವಾನಿತ ಪೈಲ್ವಾನರಿಂದ ಸಾಂಪ್ರದಾಯಿಕ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ ಎಂದು ಮಠದ ದಿವಾನರಾದ ಡಾ. ಉದಯ್ ಸರಳತ್ತಾಯ ತಿಳಿಸಿದ್ದಾರೆ. ಇದರೊಂದಿಗೆ ರಾಜಾಂಗಣದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ಬೃಹತ್ ಹುಲಿವೇಷ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳು ಆಯೋಜನೆಗೊಂಡಿದ್ದು, ವಿಜೇತ ತಂಡಕ್ಕೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಸೆಪ್ಟೆಂಬರ್ 6ರಂದು ಕೋಟಿ ತುಳಸಿ ಅರ್ಚನೆ ಹಾಗೂ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ.
ಭಕ್ತಾದಿಗಳ ಅನುಕೂಲಕ್ಕಾಗಿ ಪರ್ಯಾಯ ಶಿರೂರು ಮಠದ ವತಿಯಿಂದ ಜನವರಿಯಿಂದ ಈವರೆಗೆ ಸುಮಾರು 4 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸುಗಮ ದರ್ಶನಕ್ಕಾಗಿ 50.40 ಲಕ್ಷ ರೂ. ವೆಚ್ಚದ ಕ್ಯೂ ವ್ಯವಸ್ಥೆ, 65 ಲಕ್ಷ ರೂ. ವೆಚ್ಚದ ಬಯೋಗ್ಯಾಸ್, 75.42 ಲಕ್ಷ ರೂ. ವೆಚ್ಚದ ಶೌಚಾಲಯ, ಬ್ರಹ್ಮರಥಕ್ಕೆ 15 ಲಕ್ಷ ರೂ. ವೆಚ್ಚದಲ್ಲಿ ನೂತನ ಚಕ್ರಗಳು, 20.30 ಲಕ್ಷ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಹಾಗೂ 24.74 ಲಕ್ಷ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಠದ ಮ್ಯಾನೇಜರ್ ವಾಸುದೇವ ಆಚಾರ್ಯ, ರಾಮಮೂರ್ತಿ ಭಟ್ ಹಾಗೂ ಕಾರ್ತಿಕ್ ಭಟ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









