ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿಯು 2026ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಕರಾವಳಿಯ ರಂಗಭೂಮಿ ಪರಂಪರೆಯ ಪ್ರಸಿದ್ಧ ತೆಂಕುತಿಟ್ಟು ಹಾಗೂ ಬಡಗುತಿಟ್ಟು ಎರಡೂ ಶೈಲಿಗಳಲ್ಲಿ ಅಪಾರ ಸಾಧನೆ ಮಾಡಿರುವ ಹಿರಿಯ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ ಅವರನ್ನು ಈ ಬಾರಿಯ ಅತ್ಯುನ್ನತ ಹಾಗೂ ಗೌರವಾನ್ವಿತ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಅಕಾಡೆಮಿಯ ಗೌರವ ಪ್ರಶಸ್ತಿ ವಿಭಾಗದಲ್ಲಿ ಯಕ್ಷಗಾನದ ವಿವಿಧ ವಿಭಾಗಗಳ ಹಿರಿಯ ಸಾಧಕರನ್ನು ಗುರುತಿಸಲಾಗಿದೆ. ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ ಜಪ್ಪು ದಯಾನಂದ ಶೆಟ್ಟಿ, ಹೆಸರಾಂತ ಭಾಗವತ ಸಿರಿಬಾಗಿಲು ರಾಮಕೃಷ್ಣಮಯ್ಯ, ಮದ್ದಳೆ ವಾದಕ ಪದ್ಮನಾಭ ಉಪಾಧ್ಯಾಯ, ಬಡಗುತಿಟ್ಟಿನ ಹಿರಿಯ ಕಲಾವಿದ ಮಹಾಬಲ ದೇವಾಡಿಗ ಹಾಗೂ ಮೂಡಲಪಾಯ ಯಕ್ಷಗಾನ ವಿಭಾಗದ ಭಾಗವತ ದೊಡ್ಡ ಮಲ್ಲಯ್ಯ ಅವರು ಈ ಬಾರಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಲವು ವಿಭಾಗಗಳ ಕಲಾವಿದರಿಗೆ ‘ಯಕ್ಷಸಿರಿ ಪ್ರಶಸ್ತಿ’ ಘೋಷಿಸಲಾಗಿದೆ. ವೇದಮೂರ್ತಿ ರಾಘವೇಂದ್ರ ಆಸ್ರಣ್ಣ, ತೆಂಕುತಿಟ್ಟು ವೇಷಭೂಷಣ ವಿಭಾಗದಿಂದ ಪೂರ್ಣಿಮಾ ಯತೀಶ್ ರೈ ಹಾಗೂ ರೇಶ್ ಕುಪ್ಪೆಪದವು, ಭಾಗವತಿಕೆಯಲ್ಲಿ ದುರ್ಗಾಪರಮೇಶ್ವರಿ ಕುಕ್ಕಿಲ, ಹಾಸ್ಯ ವಿಭಾಗದಿಂದ ಉಜಿರೆ ನಾರಾಯಣ ಪೂಜಾರಿ, ಚೆಂಡೆವಾದಕ ವಿದ್ವಾನ್ ಲಕ್ಷ್ಮೀ ನಾರಾಯಣ ಉಪಾಧ್ಯ, ಬಡಗುತಿಟ್ಟಿನ ಹೆರಿಯ ನಾಯ್ಕ್ ಮೊಗೆಬೆಟ್ಟು, ಬಡಬಡಗು ಶೈಲಿಯ ರಾಮಗೌಡ ಗುಣವಂತೆ, ಹಿರಿಯ ಕಲಾವಿದ ಪಡ್ರೆ ಕುಮಾರ್ ಮತ್ತು ಮೂಡಲಪಾಯ ಶೈಲಿಯ ಶಿವಯ್ಯ ಈ ಸಾಲಿನ ಪ್ರಶಸ್ತಿಗೆ ಭಾಜನರಾದ ಪ್ರಮುಖರು.
ಇನ್ನು 2026 ರ ಸಾಲಿನ ದತ್ತಿನಿಧಿ ಪುರಸ್ಕಾರಗಳಿಗೂ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮೂಡಲಪಾಯ ಯಕ್ಷಗಾನ ಕಲಾವಿದ ಭೀಮಣ್ಣ ಅವರಿಗೆ ‘ದಿವಂಗತ ಕರ್ಕಿ ಹಿರಿಯಪರಮಯ್ಯ ಹಾಸ್ಯಗಾರ ದತ್ತಿ ಪ್ರಶಸ್ತಿ’ ಲಭಿಸಿದೆ. ಇದರ ಜೊತೆಗೆ, ಯಕ್ಷಗಾನ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆ ನಡೆಸಿದ ಆಂಧ್ರಪ್ರದೇಶದ ಪ್ರೊ. ಎಂ.ಎನ್. ವೆಂಕಟೇಶ್ ಅವರನ್ನು ‘ಡಾ. ತಲ್ಲೂರು ಶಿವರಾಮ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ದತ್ತಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









