ಉಡುಪಿ : ನಗರ ವ್ಯಾಪ್ತಿಯಲ್ಲಿ ಸರಣಿ ಮನೆಗಳ ಬೀಗ ಮುರಿದು ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 23.56 ಲಕ್ಷ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, ವಿದೇಶಿ ಕರೆನ್ಸಿ, ನಗದು, ವಾಹನಗಳು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೆರಂಪಳ್ಳಿಯ ಅರುಣ್ ಎಸ್ವಿ (43) ಹಾಗೂ ಗರಡಿಮಜಲುವಿನ ಕೌಶಿಕ್ (19) ಬಂಧಿತ ಆರೋಪಿಗಳಾಗಿದ್ದಾರೆ.
ಆಗಸ್ಟ್ 12 ರಂದು ಉಡುಪಿಯ ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಮ್ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಈ ಯಶಸ್ಸು ಸಿಕ್ಕಿದೆ. ದುಬೈನಿಂದ ಊರಿಗೆ ಮರಳಿದ್ದ ಸನಮ್ ಅವರು ಆಗಸ್ಟ್ 8 ರಂದು ಸಂಬಂಧಿಕರ ಮನೆಗೆ ತೆರಳಿದ್ದಾಗ, ಕಳ್ಳರು ಮನೆಯ ಮೇಲ್ಛಾವಣಿಯ ಬಾಗಿಲು ಮುರಿದು ಒಳನುಗ್ಗಿದ್ದರು. ಸುಮಾರು 10 ಲಕ್ಷ ಮೌಲ್ಯದ ದುಬೈ ದಿರ್ಹಮ್ ವಿದೇಶಿ ಕರೆನ್ಸಿ ಹಾಗೂ 14,000 ರೂ. ನಗದನ್ನು ಕದ್ದೊಯ್ದಿದ್ದರು.
ಪ್ರಕರಣದ ಗಾಂಭೀರ್ಯವನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು, ಉಡುಪಿ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಹಾಗೂ ಪಿಎಸ್ಐ ಪ್ರಕಾಶ್ ನೇತೃತ್ವದಲ್ಲಿ ಪ್ರಸನ್ನ ಸಿ, ಜೀವನ್ ಕುಮಾರ್, ಆನಂದ್, ಮಲ್ಲಯ್ಯ ಹಿರೇಮಠ ಮತ್ತು ಹೇಮಂತ್ ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಈ ತಂಡವು ಆಗಸ್ಟ್ 23 ರಂದು ಪೆರಂಪಳ್ಳಿಯ ಸಂತೋಷ್ ನಗರದಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಬಂಧಿತರಿಂದ ಸುಮಾರು 13.26 ಲಕ್ಷ ರೂ. ಮೌಲ್ಯದ 88.40 ಗ್ರಾಂ ಚಿನ್ನ, 2.86 ಲಕ್ಷ ರೂ. ಮೌಲ್ಯದ 1.36 ಕೆಜಿ ಬೆಳ್ಳಿ ಆಭರಣ, 2 ಲಕ್ಷ ರೂ. ವಿದೇಶಿ ಕರೆನ್ಸಿ, 33,000 ರೂ. ನಗದು, 4 ಲಕ್ಷ ರೂ. ಮೌಲ್ಯದ ಆಟೋರಿಕ್ಷಾ, 45,000 ರೂ. ಮೌಲ್ಯದ ಕದ್ದ ಪಲ್ಸರ್ ಬೈಕ್, 23,500 ರೂ. ಮೌಲ್ಯದ ಚಿನ್ನದ ನಾಣ್ಯ ಹಾಗೂ ವಿದೇಶಿ ಕೈಗಡಿಯಾರಗಳನ್ನು ಜಪ್ತಿ ಮಾಡಲಾಗಿದೆ.
ಪೋಕ್ಸೊ ಪ್ರಕರಣವೊಂದರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿ 2025ರ ಜುಲೈನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಮುಖ್ಯ ಆರೋಪಿ ಅರುಣ್ ಆಚಾರ್ಯ, ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ಕದ್ದ ಬೈಕ್ನಲ್ಲಿ ಸಂಚರಿಸುತ್ತಾ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದನು. ಕೊಡಂಕೂರು, ಪುತ್ತೂರು, ಕೆಳಾರ್ಕಲಬೆಟ್ಟು ಹಾಗೂ ನೇಜಾರಿನಲ್ಲಿ ನಡೆದ ಒಟ್ಟು 5 ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನ, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿಗಳಾದ ಪ್ರಸನ್ನ, ಜೀವನ್, ಕೃಷ್ಣದೇವಾಡಿಗ, ಆನಂದ್, ಓಬಳೇಶ್, ಮಲ್ಲಯ್ಯ ಮತ್ತು ಹೇಮಂತ್ ಅವರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









