ಕಾರ್ಕಳ: ಜನರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಗುಣಮಟ್ಟದ ಹಾಗೂ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕರೆ ನೀಡಿದ್ದಾರೆ. ಹೋಟೆಲ್ಗಳಲ್ಲಿ ಹಣಗಳಿಕೆಯ ಉದ್ದೇಶದಿಂದ ಶುಚಿತ್ವ ಪಾಲಿಸದೆ ತರಕಾರಿ ಹಾಗೂ ಮಾಂಸಾಹಾರಗಳನ್ನು ಬೇಯಿಸುವುದು, ಉಳಿದ ಆಹಾರವನ್ನು ಫ್ರಿಡ್ಜ್ನಲ್ಲಿಟ್ಟು ಮರುದಿನ ಗ್ರಾಹಕರಿಗೆ ಬಡಿಸುವುದು ಮತ್ತು ಅಪಾಯಕಾರಿ ಮಸಾಲೆಗಳನ್ನು ಬಳಸುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಶನಿವಾರ (ಆಗಸ್ಟ್ 8) ಕಾರ್ಕಳದಲ್ಲಿ ಆತಂಕ ವ್ಯಕ್ತಪಡಿಸಿದರು.
ಹಣ ನೀಡಿ ಆಹಾರ ಸೇವಿಸುವ ಗ್ರಾಹಕರಿಗೆ ಸುರಕ್ಷಿತ ಹಾಗೂ ನೈರ್ಮಲ್ಯಯುತ ಆಹಾರ ಒದಗಿಸುವುದು ಹೋಟೆಲ್ಗಳ ಜವಾಬ್ದಾರಿಯಾಗಿದ್ದು, ಕಳಪೆ ಆಹಾರ ನೀಡಿ ಜನರ ಆರೋಗ್ಯದ ಜೊತೆ ಆಟವಾಡುವ ಹೋಟೆಲ್ಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪಬ್ ಹಾಗೂ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನರ ಜೀವ ರಕ್ಷಣೆಗಾಗಿ ಈ ತಪಾಸಣೆ ಅಭಿಯಾನವು ರಾಜ್ಯದಾದ್ಯಂತ ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಕೇಲವ ರುಚಿಗಷ್ಟೇ ಮಹತ್ವ ನೀಡದೆ ಆರೋಗ್ಯಕ್ಕೆ ಪೂರಕವಾದ ಆಹಾರ ಸೇವನೆಗೆ ಗಮನ ನೀಡಬೇಕು ಮತ್ತು ಉದ್ಯೋಗಸ್ಥರು ಮನೆಯಲ್ಲೇ ತಯಾರಿಸಿದ ಆಹಾರವನ್ನು ಕೆಲಸದ ಸ್ಥಳಗಳಿಗೆ ಕೊಂಡೊಯ್ಯುವುದು ಸೂಕ್ತ ಎಂದರು. ಆಹಾರದಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಹಾಗೂ ಅಪಾಯಕಾರಿ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಈ ತಪಾಸಣೆಯ ಮುಖ್ಯ ಉದ್ದೇಶವಾಗಿದ್ದು, ಜನರು ಅನುಮಾನಾಸ್ಪದ ಆಹಾರ ಪದ್ಧತಿಯಿಂದ ದೂರವಿದ್ದು ಜಾಗೃತರಾಗಿರಬೇಕು ಎಂದು ತಿಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









