ಮಂಗಳೂರು : ಕೇಂದ್ರ ಸರ್ಕಾರದ ‘ಪಿಎಂ ಇ-ಬಸ್ ಸೇವಾ’ ಯೋಜನೆಯಡಿ ಮಂಗಳೂರು ಕೆಎಸ್ಆರ್ಟಿಸಿ ವಿಭಾಗಕ್ಕೆ 100 ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಬಸ್ಗಳು ಹಂಚಿಕೆಯಾಗಿವೆ. ಈ ಪರಿಸರಸ್ನೇಹಿ ಬಸ್ಗಳನ್ನು ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಮಾತ್ರವಲ್ಲದೆ ಉಡುಪಿ, ಮೂಡುಬಿದಿರೆ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಸ್ತರಿಸಲು ಸಾರಿಗೆ ಸಂಸ್ಥೆ ಯೋಜಿಸಿದೆ.
ಪ್ರಾಥಮಿಕ ಮಾರ್ಗಸೂಚಿಯಂತೆ ಸ್ಟೇಟ್ ಬ್ಯಾಂಕ್ನಿಂದ ಸುರತ್ಕಲ್, ಮೂಲ್ಕಿ, ಪಡುಬಿದ್ರಿ ಮಾರ್ಗವಾಗಿ ಉಡುಪಿಗೆ 10 ಬಸ್ಗಳು ಹಾಗೂ ವಾಮಂಜೂರು, ಕೈಕಂಬ ಮಾರ್ಗವಾಗಿ ಮೂಡುಬಿದಿರೆಗೆ 10 ಬಸ್ಗಳನ್ನು ನಿಯೋಜಿಸಲಾಗುವುದು. ಜೊತೆಗೆ, ಹಿಂದೆ ಸ್ಥಗಿತಗೊಂಡಿದ್ದ ವಿಮಾನ ನಿಲ್ದಾಣದ ಮಾರ್ಗಕ್ಕೆ 2 ಇ-ಬಸ್ಗಳು ಮತ್ತು ಪಡೀಲ್ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ 4 ಬಸ್ಗಳು ಸಂಚರಿಸಲಿವೆ.
ಬಸ್ಗಳ ನಿರ್ವಹಣೆಗಾಗಿ ಕುಂಟಿಕಾನ ಮತ್ತು ಬಾಳೆಪುಣಿಯಲ್ಲಿ ತಲಾ 50 ಬಸ್ಗಳ ನಿಲುಗಡೆ ಸಾಮರ್ಥ್ಯದ ಡಿಪೋಗಳನ್ನು ನಿಗದಿಪಡಿಸಲಾಗಿದೆ. ಇಲ್ಲಿ ಚಾರ್ಜಿಂಗ್ ಸ್ಟೇಷನ್ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಈ ಬಸ್ಗಳು 150 ರಿಂದ 200 ಕಿ.ಮೀ.ವರೆಗೆ ಚಲಿಸಬಲ್ಲವು ಹಾಗೂ ಚಾರ್ಜ್ ಮಾಡಲು 1.5 ರಿಂದ 2 ಗಂಟೆ ಬೇಕಾಗುತ್ತದೆ. ದೂರದೂರುಗಳಿಗೆ ಇದು ಸೂಕ್ತವಲ್ಲದ ಕಾರಣ ಸಂಪೂರ್ಣವಾಗಿ ಸ್ಥಳೀಯ ಮತ್ತು ನೆರೆಹೊರೆಯ ಮಾರ್ಗಗಳಿಗಷ್ಟೇ ಬಳಸಲಾಗುತ್ತದೆ.
ಪಿಎಂ ಇ-ಬಸ್ ಸೇವಾ ಯೋಜನೆಯಡಿ 60:40 ಅನುಪಾತದ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ಮಾದರಿಯಲ್ಲಿ ಈ ಇ-ಬಸ್ಗಳನ್ನು ಒದಗಿಸಲಾಗುತ್ತಿದ್ದು, ರಾಜ್ಯದಲ್ಲಿ ಅನುಷ್ಠಾನ ಪ್ರಕ್ರಿಯೆ ವೇಗವಾಗಿ ಸಾಗಿದೆ. ಬಸ್ಗಳು ಕೈಸೇರಿದ ತಕ್ಷಣವೇ ನಿಖರ ರೂಟ್ಗಳು ಅಂತಿಮಗೊಂಡು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಸಾರಿಗೆ ಸಚಿವ ಬಿ.ಎಸ್. ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









