ಉಡುಪಿ : ಸರ್ಕಾರಿ ಜಾಗದಲ್ಲಿ ಯಾವುದೇ ಪೂರ್ವ ಅನುಮತಿ ಪಡೆಯದೆ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಬಂಡೆ ಕಲ್ಲುಗಳನ್ನು ಸ್ಫೋಟಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ತೋಡಿಕರ್ಮಾರ್ ನಿವಾಸಿ ಕೆ. ಗೋವಿಂದ ರಾಜ್ (40) ಮತ್ತು ವಿಜಯಪುರ ಮೂಲದ ಪ್ರಸ್ತುತ ಕಲ್ಯಾ ಹಾಳೆಕಟ್ಟೆ ನಿವಾಸಿ ಶೇಖಪ್ಪ ಚಲವಾದಿ (28) ಎಂದು ಗುರುತಿಸಲಾಗಿದೆ.
ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಎಂಬಲ್ಲಿ ಸೆಪ್ಟೆಂಬರ್ 5ರಂದು ಇಲಾಖೆಯ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಪಾಯಕಾರಿ ರೀತಿಯಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಿ ಅಕ್ರಮವಾಗಿ ಕಲ್ಲು ಸ್ಫೋಟ ನಡೆಸಲಾಗುತ್ತಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಣಿಪಾಲ ಠಾಣೆಯ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ತಿಮ್ಮೇಶ್ ಬಿ.ಎನ್. ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಕಲ್ಲು ಸ್ಫೋಟದ ಕೃತ್ಯಕ್ಕೆ ಬಳಸಲಾದ ಟ್ರ್ಯಾಕ್ಟರ್, ಡ್ರಿಲ್ಲಿಂಗ್ ಯಂತ್ರ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









