ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಹಕಾರ ಸಂಘಗಳ ನೌಕರರ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 1.07 ಕೋಟಿ ರೂಪಾಯಿ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ಘೋಷಿಸಿದೆ. ಮಂಗಳೂರಿನ ಕೊಡಿಯಾಲ್ ಬೈಲ್ನಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಪ್ತವರ್ಣ ಸಭಾಂಗಣದಲ್ಲಿ ನಡೆದ 95ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಈ ವಿಷಯ ತಿಳಿಸಿದರು. ನೌಕರ ಸದಸ್ಯರ ನಿರಂತರ ಬೆಂಬಲ, ಆಡಳಿತ ಮಂಡಳಿ ನಿರ್ದೇಶಕರ ಒಗ್ಗಟ್ಟಿನ ಕಾರ್ಯನಿರ್ವಹಣೆ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ವರದಿ ವರ್ಷದಲ್ಲಿ ಸಂಘವು 199.75 ಕೋಟಿ ರೂಪಾಯಿಗಳ ಬೃಹತ್ ಒಟ್ಟು ವ್ಯವಹಾರ ನಡೆಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಸಂಘವು 29.16 ಲಕ್ಷ ರೂಪಾಯಿ ಪಾಲು ಬಂಡವಾಳ ಮತ್ತು 7.94 ಕೋಟಿ ರೂಪಾಯಿ ವಿವಿಧ ನಿಧಿಗಳನ್ನು ಹೊಂದಿದ್ದು, ಠೇವಣಿ ಸಂಗ್ರಹಣೆ 108.08 ಕೋಟಿ ರೂಪಾಯಿಗೆ ಹಾಗೂ ಸಾಲ ಮುಂಗಡ ಮೊತ್ತ 91.67 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಸದ್ಯ ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿ ನಾಲ್ಕು ಶಾಖೆಗಳನ್ನು ಹೊಂದಿರುವ ಸಂಘವು, ಮುಂದಿನ ದಿನಗಳಲ್ಲಿ ಸದಸ್ಯರ ಅನುಕೂಲಕ್ಕಾಗಿ ತಾಲೂಕುವಾರು ಹೊಸ ಶಾಖೆಗಳನ್ನು ತೆರೆಯುವ ಯೋಜನೆ ರೂಪಿಸಿದೆ.
ಸಂಘದ ಅತ್ಯುತ್ತಮ ಪ್ರಗತಿಯನ್ನು ಪರಿಗಣಿಸಿ ಎಸ್ಸಿಡಿಸಿಸಿ ಬ್ಯಾಂಕ್ ಸತತ 9ನೇ ಬಾರಿಗೆ ಪ್ರತಿಷ್ಠಿತ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಂಘವು ಕೊಡಿಯಾಲ್ ಬೈಲ್ನಲ್ಲಿ ಸುಸಜ್ಜಿತ ‘ಉನ್ನತಿ’ ಸ್ವಂತ ಕಟ್ಟಡ ಹೊಂದುವಂತೆ ಮಾಡಲು ಹಾಗೂ ನಿರಂತರ ಅಭಿವೃದ್ಧಿಯತ್ತ ಸಾಗಲು ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ಜಗದೀಶ್ಚಂದ್ರ ಅಂಚನ್ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಇತ್ತೀಚೆಗೆ ಅಗಲಿದ ಸಂಘದ ಹಿರಿಯ ಸದಸ್ಯರು ಮತ್ತು ಸಿಬ್ಬಂದಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಾಮಾಜಿಕ ಬದ್ಧತೆಯ ಭಾಗವಾಗಿ ಸಂಘವು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆ, ಈ ಬಾರಿಯೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಗಳಿಸಿದ 47 ಪ್ರತಿಭಾನ್ವಿತ ಮಕ್ಕಳಿಗೆ ಎಸ್ಸಿಡಿಸಿಸಿ ಬ್ಯಾಂಕ್ ಸಿಇಒ ಕೆ. ಗೋಪಾಲಕೃಷ್ಣ ಭಟ್ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಘವ ಆರ್. ಉಚ್ಚಿಲ್, ನಿರ್ದೇಶಕರುಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









