
ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದ ವತಿಯಿಂದ ಸಂಸ್ಥೆಯ ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ‘ಸ್ಥಾಪಕಾಧ್ಯಕ್ಷ ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ’ ಪ್ರದಾನ ಸಮಾರಂಭವು ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ಜೈರಾಜ್ ಬಿ. ರೈ ಅವರು ಎಲ್ಲರನ್ನೂ ಸಾಧಕರ ಪರಿಚಯದೊಂದಿಗೆ ಸ್ವಾಗತಿಸಿ, ಯುವ ಪೀಳಿಗೆಗೆ ಇಂತಹ ಪ್ರಶಸ್ತಿಗಳು ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು. ಈ ವರ್ಷ ಒಟ್ಟು 114 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹13 ಲಕ್ಷ ಮೊತ್ತದ ಪ್ರೋತ್ಸಾಹಧನ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ವಿಕಸಿತ ಭಾರತದ ಕನಸನ್ನು ನನಸು ಮಾಡಲು ಇಂದಿನ ಯುವಶಕ್ತಿಯ ನಿರಂತರ ಶ್ರಮ ಹಾಗೂ ಸಾಧನೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಇಂದಿನ ದಿನಗಳಲ್ಲಿ ಯುವಜನತೆಗೆ ಸಾಧಿಸಲು ಅಸಂಖ್ಯಾತ ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಬೆನ್ನಟ್ಟಿ ಭಾರತೀಯ ಸೇವೆ, ಆಡಳಿತ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ನಜ್ಮಾ ಫಾರೂಕಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಅಧ್ಯಯನ ಕ್ಷೇತ್ರದಲ್ಲಿ ಕೌಶಲ್ಯ ಹಾಗೂ ತಜ್ಞತೆಯನ್ನು ಬೆಳೆಸಿಕೊಂಡು ತಮ್ಮ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ನೈಜ ತೃಪ್ತಿ ಸಿಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿ ಅವರ ಧರ್ಮಪತ್ನಿ ಲಕ್ಷ್ಮಿ ಜಯಪಾಲ ಶೆಟ್ಟಿ, ಪುತ್ರಿ ವಿದ್ಯಾ ಹೆಗ್ಡೆ ಹಾಗೂ ಅಳಿಯ ಡಾ. ಆಶಿತ್ ಹೆಗ್ಡೆ ಅವರು ಸ್ಥಾಪಿಸಿದ ಪ್ರತ್ಯೇಕ ಪ್ರತಿಭಾ ಪುರಸ್ಕಾರವನ್ನು 6 ವಿಶೇಷ ಸಾಧಕ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಮಾರಂಭದಲ್ಲಿ ಸೊಸೈಟಿಯ ನಿರ್ದೇಶಕರಾದ ಕೆ. ಸೀತಾರಾಮ ರೈ, ಪಿ.ಬಿ. ದಿವಾಕರ ರೈ, ಪ್ರಸಾದ್ ಕೌಶಲ್ ಶೆಟ್ಟಿ, ಕುಂಬ್ರ ದಯಾಕರ ಆಳ್ವ, ಎ. ಚಿಕ್ಕಪ್ಪ ನಾಯ್ಕ್, ಡಾ. ಬಿ. ಸಂಜೀವ ರೈ ಹಾಗೂ ಮಹಾಪ್ರಬಂಧಕ ಗಣೇಶ್ ಜಿ.ಕೆ. ಉಪಸ್ಥಿತರಿದ್ದರು. ನಿರ್ದೇಶಕ ಎಂ. ರಾಮಯ್ಯ ಶೆಟ್ಟಿ ವಂದಿಸಿದರು, ಹಿರಿಯ ವ್ಯವಸ್ಥಾಪಕಿ ಸವಿತಾ ಎಸ್. ಉಪಾಧ್ಯಕ್ಷರ ಸಂದೇಶ ವಾಚಿಸಿದರು, ಶಾಖಾಧಿಕಾರಿ ಅಶ್ವಿನಿ ಎಸ್. ಶೆಟ್ಟಿ ಪ್ರಾರ್ಥಿಸಿದರು ಹಾಗೂ ವ್ಯವಸ್ಥಾಪಕರಾದ ಶಮಂತ್ ಟಿ. ರೈ ಮತ್ತು ಧನಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









