ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ, ಏಕಾದಶಿ ಪವಿತ್ರ ದಿನಗಳ ಅಂಗವಾಗಿ ವಿವಿಧ ಧಾರ್ಮಿಕ ಸೇವೆಗಳ ನರವೇರಿಕೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಜಂಟಿ ಪ್ರಕಟಣೆ ಹೊರಡಿಸಿದ್ದು, ಭಕ್ತಾದಿಗಳು ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ದೇವಸ್ಥಾನದ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 3 ಮತ್ತು 4 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಾಗೂ ಸೆಪ್ಟೆಂಬರ್ 6 ಮತ್ತು 7 ರಂದು ದಶಮಿ ಮತ್ತು ಏಕಾದಶಿ ಪರ್ವಕಾಲದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ‘ಸರ್ಪಸಂಸ್ಕಾರ’ ಸೇವೆಯು ನೆರವೇರುವುದಿಲ್ಲ. ಇದರೊಂದಿಗೆ, ಸೆಪ್ಟೆಂಬರ್ 04 ರ ಜನ್ಮಾಷ್ಟಮಿಯಂದು ಹಾಗೂ ಸೆಪ್ಟೆಂಬರ್ 07 ರ ಏಕಾದಶಿಯಂದು ಆಶ್ಲೇಷಬಲಿ, ನಾಗಪ್ರತಿಷ್ಠೆ ಮತ್ತು ಮಹಾಅಭಿಷೇಕ ಸೇವೆಗಳೂ ಸಹ ರದ್ದಾಗಲಿವೆ.
ಇನ್ನುಳಿದಂತೆ ಕ್ಷೇತ್ರದಲ್ಲಿ ಎಂದಿನಂತೆ ಮಹಾಪೂಜೆ, ಶೇಷಸೇವೆ, ಅಭಿಷೇಕಗಳು, ಅರ್ಚನೆ ಸೇವೆಗಳು ಹಾಗೂ ದೇವರ ದರ್ಶನ ವ್ಯವಸ್ಥೆಗಳು ತಡೆರಹಿತವಾಗಿ ನಡೆಯಲಿವೆ. ನಿಗದಿತ ದಿನಾಂಕಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಈ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









