ಧರ್ಮಸ್ಥಳ : ಬಂಗ್ಲೆಗುಡ್ಡೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ದೊರೆತಿದ್ದ ಏಳು ಅಸ್ಥಿಪಂಜರಗಳ ಪೈಕಿ ಮೂವರ ಗುರುತನ್ನು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ನಡೆಸಿದ ಡಿಎನ್ಎ ಪರೀಕ್ಷೆಯು ಅಧಿಕೃತವಾಗಿ ದೃಢಪಡಿಸಿದೆ. ಸೌಜನ್ಯಳ ಚಿಕ್ಕಪ್ಪ ವಿಠಲ ಗೌಡ ಅವರು ನೀಡಿದ್ದ ಸುಳಿವನ್ನು ಆಧರಿಸಿ ಎಸ್ಐಟಿ ತಂಡವು 2025 ರ ಸೆಪ್ಟೆಂಬರ್ 17 ಮತ್ತು 18 ರಂದು ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸುದೀರ್ಘ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ 7 ಅಸ್ಥಿಪಂಜರಗಳು ಹಾಗೂ ಕೆಲವು ಗುರುತಿನ ಚೀಟಿಗಳು ಸಿಕ್ಕಿದ್ದವು. ದೊರೆತ ಐಡಿ ಕಾರ್ಡ್ಗಳನ್ನಿಟ್ಟುಕೊಂಡು ಎಸ್ಐಟಿ ಅಧಿಕಾರಿಗಳು ಶಂಕಿತ ಕುಟುಂಬಗಳನ್ನು ಸಂಪರ್ಕಿಸಿ, ಬೆಳ್ತಂಗಡಿ ನ್ಯಾಯಾಲಯದ ಮುಖಾಂತರ ಅವರ ಡಿಎನ್ಎ ಮಾದರಿಗಳನ್ನು ಪಡೆದು ಪರೀಕ್ಷೆಗೆ ರವಾನಿಸಿದ್ದರು.
ಪ್ರಯೋಗಾಲಯದಿಂದ ಬಂದಿರುವ ಇತ್ತೀಚಿನ ವರದಿಯ ಪ್ರಕಾರ, ಮೂರು ಅಸ್ಥಿಪಂಜರಗಳ ಡಿಎನ್ಎ ಮಾದರಿಯು ಆಯಾ ಕುಟುಂಬದವರ ಜೊತೆ ಸಂಪೂರ್ಣವಾಗಿ ತಾಳೆಯಾಗಿದೆ. ಮೃತರನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ ನಾರಾಯಣ (27) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾನಹಳ್ಳಿಯ ಕೃಷ್ಣಪ್ಪ (85) ಎಂದು ನಿಖರವಾಗಿ ಗುರುತಿಸಲಾಗಿದೆ. ಅಯ್ಯಪ್ಪ ಅವರು 2017 ರ ಜೂನ್ನಲ್ಲಿ ಮೈಸೂರಿನ ಆಸ್ಪತ್ರೆಗೆ ತೆರಳಿ ನಾಪತ್ತೆಯಾಗಿದ್ದರು, ಈ ಕುರಿತು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಬೆಂಗಳೂರಿನ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಆದಿಶೇಷ ನಾರಾಯಣ 2013 ರ ಅಕ್ಟೋಬರ್ನಲ್ಲಿ ಮೊಬೈಲ್ ಮನೆಯಲ್ಲೇ ಬಿಟ್ಟು ಕಣ್ಮರೆಯಾಗಿದ್ದರು. ಹಾಗೆಯೇ 85 ವರ್ಷದ ವೃದ್ಧ ಕೃಷ್ಣಪ್ಪ ಅವರು 2024 ರ ಅಕ್ಟೋಬರ್ನಲ್ಲಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದು, ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಡಿಎನ್ಎ ಪರೀಕ್ಷೆಯ ಮೂಲಕ ಮೂವರ ಗುರುತು ದೃಢಪಟ್ಟಿರುವ ಸಂಪೂರ್ಣ ಅಂತಿಮ ವರದಿಯನ್ನು ಎಸ್ಐಟಿ ಅಧಿಕಾರಿಗಳು ಜುಲೈ 15 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಾನೂನು ಪ್ರಕ್ರಿಯೆಗಳ ಪ್ರಕಾರ, ಮೃತರ ವಾರಸುದಾರರು ಎಸ್ಐಟಿಗೆ ಮನವಿ ಸಲ್ಲಿಸಿ ಅಸ್ಥಿಪಂಜರದ ಅವಶೇಷಗಳನ್ನು ತಮ್ಮ ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










