ಮಂಗಳೂರು : ಆಹಾರ ಸುರಕ್ಷತೆ ಕಾಪಾಡಲು ಹಾಗೂ ನಕಲಿ ಔಷಧಿಗಳ ಜಾಲಕ್ಕೆ ತಡೆ ಒಡ್ಡಲು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ವಿಶೇಷ ‘ವಾಚ್ ಟೀಮ್’ಗಳನ್ನು ರಚಿಸುವ ಕುರಿತು ಸರ್ಕಾರ ಗಂಭೀರ ಆಲೋಚನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಕೆಟ್ಟ ಆಹಾರ ಹಾಗೂ ನಕಲಿ ಮಾತ್ರೆಗಳ ಕುರಿತು ಸುಲಭವಾಗಿ ದೂರು ನೀಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದನ್ನು ಎಲ್ಲಾ ಹೋಟೆಲ್ ಹಾಗೂ ಮೆಡಿಕಲ್ ಶಾಪ್ಗಳ ಎದುರು ಕಡ್ಡಾಯವಾಗಿ ಪ್ರದರ್ಶಿಸಲು ಸೂಚನೆ ನೀಡಲಾಗುವುದು ಎಂದರು.
ಈ ಕ್ಯೂಆರ್ ಕೋಡ್ ವ್ಯವಸ್ಥೆ ಆರಂಭಗೊಂಡ ಕೇವಲ ಎರಡೇ ದಿನಗಳಲ್ಲಿ 400ಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಇರುವ ಅಧಿಕಾರಿಗಳೇ ಪರಿಶೀಲನೆ ನಡೆಸುತ್ತಿದ್ದಾರೆ ಆದರೂ, ಈ ಪ್ರಕ್ರಿಯೆಯನ್ನು ಇನ್ನಷ್ಟು ವ್ಯಾಪಕಗೊಳಿಸಲು ಮತ್ತು ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಲು ನಿವೃತ್ತ ಅಧಿಕಾರಿಗಳು, ಪ್ರಾಧ್ಯಾಪಕರು, ತಜ್ಞರು ಹಾಗೂ ಸಾಮಾಜಿಕ ಕಾಳಜಿಯುಳ್ಳ ಹಿರಿಯ ನಾಗರಿಕರನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿ ಅವರಿಗೆ ನಿರ್ದಿಷ್ಟ ಹಕ್ಕುಗಳನ್ನು ನೀಡುವ ಚಿಂತನೆ ಇದೆ. ಕಾನೂನು ಅಂಶಗಳನ್ನು ಪರಿಶೀಲಿಸಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಇದೇ ವೇಳೆ ನಕಲಿ ಔಷಧಿ ಜಾಲದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಈ ಅಕ್ರಮ ದಂಧೆಯು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ನೆರೆ ರಾಜ್ಯಗಳಿಂದಲೂ ಸರಬರಾಜಾಗುವ ಸಾಧ್ಯತೆಯಿದೆ ಎಂದರು. ಇತ್ತೀಚೆಗೆ ಬಿಡದಿ ಬಳಿ ಬಯಲಾದ ನಕಲಿ ಔಷಧ ತಯಾರಿಕಾ ಜಾಲವನ್ನು ಉಲ್ಲೇಖಿಸಿದ ಅವರು, ಈ ಪ್ರಕರಣದ ಮೂಲವನ್ನು ಭೇದಿಸಿ ಸಮಗ್ರ ತನಿಖೆ ನಡೆಸಲು ಈಗಾಗಲೇ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ ಎಂದು ವಿವರ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









