ಮಂಗಳೂರು : ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಉದ್ಯಮಗಳ ಸಮಿತಿಯು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೈಗೊಂಡಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿ ಸಿದ್ಧಪಡಿಸಿದ 139ನೇ ವರದಿಯನ್ನು ಸಮಿತಿಯ ಸದಸ್ಯರಾದ ಐವನ್ ಡಿಸೋಜಾ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ್ದಾರೆ. ಉಡುಪಿಯ ಕುಡಿಯುವ ನೀರಿನ ಅಭಿವೃದ್ಧಿಗಾಗಿ ಅಗತ್ಯವಿರುವ ಜಮೀನನ್ನು ಕಂದಾಯ ಇಲಾಖೆ ತ್ವರಿತವಾಗಿ ವಶಪಡಿಸಿಕೊಳ್ಳಬೇಕು ಹಾಗೂ ಹಾಲಾಡಿ ನೀರು ಸಂಸ್ಕರಣಾ ಘಟಕದ ಬಳಿ ಇರುವ ಕೆಎನ್ಎನ್ಎಲ್ ಕಾಲುವೆಯಿಂದ ಜುಲೈ ನಂತರವೂ ನೀರು ಬಳಸಲು ಅನುಮತಿ ನೀಡಬೇಕೆಂದು ವರದಿಯಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ಮಂಗಳೂರಿನ ಚೇಳೂರು ಗ್ರಾಮದಲ್ಲಿ ನಡೆಯುವ 800 ವರ್ಷಗಳ ಇತಿಹಾಸವಿರುವ ‘ಕಂದೇವು ಆಯನ’ ಮೀನುಗಾರಿಕಾ ಹಬ್ಬಕ್ಕೆ ಸಂಸ್ಕರಿಸದ ಕೊಳಚೆ ನೀರು ನಂದಿನಿ ನದಿಗೆ ಸೇರುತ್ತಿರುವುದರಿಂದ ತೀವ್ರ ಬೆದರಿಕೆ ಎದುರಾಗಿದೆ. ಈ ಜಲಮಾಲಿನ್ಯದಿಂದಾಗಿ ಅಂತರ್ಜಲ ಹಾಳಾಗುತ್ತಿದ್ದು, ಸಾಲು ಸಾಲು ಮೀನುಗಳು ಮೃತಪಟ್ಟು ನದಿಯ ಜೀವವೈವಿಧ್ಯವೇ ನಾಶವಾಗುತ್ತಿದೆ. ಈ ಪರಿಸರ ಮಾಲಿನ್ಯವನ್ನು ತಡೆದು ಪರಂಪರೆಯನ್ನು ಉಳಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿಯು ಎಚ್ಚರಿಸಿದೆ.
ನಗರದ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸಲು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಂಪೂರ್ಣ ಒಳಚರಂಡಿ ಜಾಲವನ್ನು ಮೇಲ್ದರ್ಜೆಗೇರಿಸಲು ₹1,250 ಕೋಟಿ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಶಿಫಾರಸು ಮಾಡಲಾಗಿದೆ. ಹಳೆಯ ಶಿಥಿಲಗೊಂಡ ಕಲ್ಲು ಹಾಗೂ ಕಾಂಕ್ರೀಟ್ ಚರಂಡಿ ಪೈಪ್ಗಳನ್ನು ಆಧುನಿಕ ಪೈಪ್ಗಳಾಗಿ ಪರಿವರ್ತಿಸುವುದು, ಎಸ್ಟಿಪಿ ಘಟಕಗಳ ಉನ್ನತೀಕರಣ ಮತ್ತು ಸಂಸ್ಕರಿಸಿದ ನೀರನ್ನು ನದಿಗಳಿಗೆ ಚೆಲ್ಲದೆ ಮರುಬಳಕೆ ಮಾಡುವ ಸಮಗ್ರ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









