ಉಡುಪಿ : ಕಾಪು ತಾಲೂಕಿನ ಮುದರಂಗಡಿ ಸೇಂಟ್ ಕ್ಸೇವಿಯರ್ ಚರ್ಚ್ ಸಮೀಪ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಸಫಲವಾಗಿ ಬಂಧಿಸಿದ್ದಾರೆ. ಕಳೆದ ಆಗಸ್ಟ್ ೭ ರಂದು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಡೇವಿಡ್ ಡಿಸೋಜಾ ಅವರ ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ರಕ್ತಸಿಕ್ತ ಘಟನೆಗೆ ಸಂಬಂಧಿಸಿದಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಜೂಲ್ ಶೇಖ್ (ದೀಪಕ್) ಎಂಬಿಬ್ಬರನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ಕೊಲೆ ಸಂಚಿನಲ್ಲಿ ಪಿತೂರಿ ನಡೆಸಿ, ಕೃತ್ಯಕ್ಕೆ ಆರ್ಥಿಕ ನೆರವು ಒದಗಿಸಿದ ಆರೋಪದ ಮೇಲೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಂದೆಡೆ, ಬೈಂದೂರು ವ್ಯಾಪ್ತಿಯಲ್ಲಿ ನಡೆದ ಸರ್ಕಾರಿ ನೌಕರನ ಮೇಲಿನ ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿರುವ ಮೊದಲ ಆರೋಪಿ ರಾಜು, ಪ್ರಸ್ತುತ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಸ್ಚಾರ್ಜ್ ಆದ ತಕ್ಷಣ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ.
ಇದೀಗ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಿಹಾರ ಮೂಲದ ಸೂರಜ್ ಕುಮಾರ್ (೩೧) ಎಂಬಾತನನ್ನು ಕುಂದಾಪುರ ಪೊಲೀಸರ ವಿಶೇಷ ತಂಡವು ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹನಿ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ ಬಳಿಕ ಆಗಸ್ಟ್ ೨೦ ರಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಪ್ರಗತಿಯಲ್ಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









