ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಯೋಜಿಸಲಾಗಿರುವ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ – 2026’ ಎರಡು ದಿನಗಳ ಬೃಹತ್ ಉಚಿತ ಉದ್ಯೋಗ ಮೇಳಕ್ಕೆ ಶುಕ್ರವಾರ, ಆಗಸ್ಟ್ 7ರಂದು ಬೆಳಿಗ್ಗೆ ಅಧಿಕೃತ ಚಾಲನೆ ದೊರೆಯಿತು. ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಅದ್ಧೂರಿ ಸಭಾ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಅವರು ದೀಪ ಬೆಳಗಿಸಿ ಮೇಳವನ್ನು ಉದ್ಘಾಟಿಸಿದರು. ಸ್ಥಳೀಯ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಪಿ.ಜಿ.ಆರ್. ಸಿಂಧ್ಯಾ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸೇರಿದಂತೆ ಹಲವಾರು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಈ ಬಾರಿಯ ಉದ್ಯೋಗ ಮೇಳದಲ್ಲಿ ಯೋಜನೆ, ಸಂಘಟನೆ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸುದೀರ್ಘ ಕೊಡುಗೆ ನೀಡಿ ಇತ್ತೀಚೆಗೆ ಅಗಲಿದ ಎ.ಕೆ. ಮಹೇಶ್ ಶೇಖ್ ಅವರ ನೆನಪಿನಲ್ಲಿ, ಪ್ರಧಾನ ವೇದಿಕೆಗೆ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಯಿತು. ಇದೇ ವೇಳೆ ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಹಾಗೂ ಸಮಾಜ ಸೇವೆಯಲ್ಲಿ ಅಪಾರ ಸಾಧನೆಗೈದ ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೆ.ಎನ್. ಜನಾರ್ದನ, ಎಂಆರ್ಜಿ ಗ್ರೂಪ್ನ ಡಾ. ಕೆ. ಪ್ರಕಾಶ್ ಶೆಟ್ಟಿ, ಭವಾನಿ ಗ್ರೂಪ್ನ ಕುಸುಮೋದರ ಡಿ. ಶೆಟ್ಟಿ, ಪ್ರೊವಿಟ್ ಫುಡ್ಸ್ನ ವಿನ್ಸೆಂಟ್ ಕುಟಿನ್ಹಾ ಮತ್ತು ಎಕ್ಸ್ಪರ್ಟೀಸ್ ಕಾಂಟ್ರಾಕ್ಟಿಂಗ್ ಸಂಸ್ಥೆಯ ಸಹ-ಸಂಸ್ಥಾಪಕ ಮಹಮ್ಮದ್ ಅಶ್ವಾಕ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇಶ-ವಿದೇಶಗಳ 350ಕ್ಕೂ ಅಧಿಕ ಪ್ರಮುಖ ಕಂಪೆನಿಗಳು ಪಾಲ್ಗೊಳ್ಳುತ್ತಿರುವ ಈ ಬೃಹತ್ ಮೇಳದಲ್ಲಿ ಐಟಿ, ಬಿಪಿಒ, ತಯಾರಿಕಾ ವಲಯ, ಬ್ಯಾಂಕಿಂಗ್, ಹೆಲ್ತ್ಕೇರ್, ಫಾರ್ಮಾ, ಹಾಸ್ಪಿಟಾಲಿಟಿ, ರೀಟೇಲ್, ಮೀಡಿಯಾ ಮತ್ತು ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಒಟ್ಟು 26,300ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಅಭ್ಯರ್ಥಿಗಳಿಗೆ ಲಭ್ಯವಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










