ಮಂಗಳೂರು : ಮುಖ್ಯಮಂತ್ರಿಗಳು ಖುದ್ದಾಗಿ ಮಂಗಳೂರು ಮೀನುಗಾರಿಕಾ ಧಕ್ಕೆಗೆ ಭೇಟಿ ನೀಡಿ ಮೀನುಗಾರರ ಅಹವಾಲು ಆಲಿಸಿರುವುದು ಅವರ ದೀರ್ಘಕಾಲದ ಕನಸು ನನಸಾಗುವ ಆಶಾವಾದ ಮೂಡಿಸಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದ್ದಾರೆ. ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ಹಂತದ ಜೆಟ್ಟಿ ವಿಸ್ತರಣೆ, ಕೋಟೆಪುರದಲ್ಲಿ 8 ಕೋಟಿ ರೂ. ವೆಚ್ಚದ ನಾಡದೋಣಿ ತಂಗುದಾಣ, ಎಕ್ಕೂರಿನಲ್ಲಿ ಸಗಟು ಮೀನು ಮಾರುಕಟ್ಟೆ ಹಾಗೂ ಮಂಗಳೂರು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾನಿಲಯವನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರ ಈಗಾಗಲೇ ನೀಡಿದೆ ಎಂದು ಹೇಳಿದರು.
ನೇತ್ರಾವತಿ, ಫಲ್ಗುಣಿ ನದಿಗಳು ಹಾಗೂ ಅಳಿವೆಬಾಗಿಲಿನಲ್ಲಿ ಕಳೆದ 25 ವರ್ಷಗಳಿಂದ ಸಮರ್ಪಕ ಹೂಳೆತ್ತುವಿಕೆ ನಡೆದಿಲ್ಲ ಎಂದು ಪ್ರತಿಪಾದಿಸಿದ ಅವರು, ಕಟ್ಟಿಂಗ್ ಡ್ರೆಜ್ಜರ್ ಯಂತ್ರದ ಮೂಲಕ ಹೂಳೆತ್ತಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಹೂಳೆತ್ತಿದ ಮರಳನ್ನು ಮತ್ತೆ ಸಮುದ್ರಕ್ಕೆ ಹಾಕುವ ಬದಲು ಬೆಂಗ್ರೆಯಿಂದ ಕೂಳೂರಿನವರೆಗಿನ ಬಂದರು ಭೂಮಿಯ ತಗ್ಗು ದಿಣ್ಣೆಗಳನ್ನು ಮುಚ್ಚಲು ಬಳಸಿದರೆ, ಸುಮಾರು 4,000 ಮೀನುಗಾರಿಕಾ ದೋಣಿಗಳಿಗೆ ತಂಗುದಾಣ (ಡಾಕ್) ನಿರ್ಮಿಸಲು ಸಾಧ್ಯವಾಗುತ್ತದೆ. ಈ ವಿಚಾರಕ್ಕೆ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಅಲ್ಲದೆ, ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವು ಬಂದರು ಅಭಿವೃದ್ಧಿಗೆ ಬಳಕೆಯಾಗದೆ ರಸ್ತೆ, ಚರಂಡಿಗಳಿಗೆ ಪೋಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹೂಳೆತ್ತುವ ಮರಳನ್ನು ನದಿಬದಿ ಡಾಕ್ ನಿರ್ಮಾಣಕ್ಕೆ ಬಳಸಬೇಕೇ ವಿನಃ ಅದಕ್ಕೂ ಮರಳುಗಾರಿಕೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿ ಶ್ರೀಯನ್, ಸರಳ ಕರ್ಕೇರ, ಕವಿತಾ ವಾಸು, ಕುಮಾರ್ ಮೆಂಡನ್, ನವೀನ್ ಕರ್ಕೇರ ಹಾಗೂ ಪವಿತ್ರಾ ಕರ್ಕೇರ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









