ಬಂಟ್ವಾಳ: ಶಾಲಾ ಬಸ್ ಸಂಚರಿಸುತ್ತಿದ್ದ ವೇಳೆ ಮರ ಬಿದ್ದು ಗಾಯಗೊಂಡಿದ್ದ ಪುಟ್ಟ ಬಾಲಕಿ ಅನ್ವಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಹಿನ್ನೆಲೆಯಲ್ಲಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶುಕ್ರವಾರ ಪೆರಾಜೆ ಗ್ರಾಮದ ಸಾದಿಕುಕ್ಕು ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಘಟನೆಯ ಬಳಿಕ ಅನ್ವಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಅವಧಿಯಲ್ಲಿ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಶಾಸಕರು, ಅಗತ್ಯ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಿದ್ದರು. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಅನ್ವಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಪ್ರಸ್ತುತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮನೆಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರು ಅನ್ವಿಯ ಆರೋಗ್ಯ ಸ್ಥಿತಿಯ ಕುರಿತು ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದು, ಬಾಲಕಿಗೆ ಧೈರ್ಯ ತುಂಬಿದರು. ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಿ ಮತ್ತೆ ಶಾಲೆಗೆ ತೆರಳಿ ತನ್ನ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರಿಸುವಂತೆ ಹಾರೈಸಿದರು. ಜೊತೆಗೆ ಕುಟುಂಬದ ಸದಸ್ಯರಿಗೂ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಹರೀಶ್ ಶೆಟ್ಟಿ ಪಾಣೂರು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










