
ನರಿಂಗಾನ : ಬಾವಲಿ ಗುಳಿಯ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ (ರಿ.) 12ನೇ ವರ್ಷದ ಮಹೋತ್ಸವದ ಶುಭ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸರಕಾರದಿಂದ ನೂತನವಾಗಿ ಮಂಜೂರಾದ ಜಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಹಿರಿಯರು ಹಾಗೂ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ವರ್ಕಾಡಿ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿಯವರು ದೀಪ ಪ್ರಜ್ವಲಿಸಿ ಶುಭ ಕೋರಿದರು. ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ರೈ ಅವರು ಸಂತ ಲಾರೆನ್ಸ್ ಚರ್ಚ್ ಬೋಳದ ಧರ್ಮಗುರು ಪೀಟರ್ ಡಿಸೋಜಾ ಅವರಿಗೆ ಪ್ರಥಮ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸುವ ಮೂಲಕ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಿದರು.
ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಲಕ್ಷ್ಮೀನಾರಾಯಣ ಹೊಳ್ಳ ಮರಿಕಾಪು ಬೀಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 11 ವರ್ಷಗಳಿಂದ ಗಣೇಶ್ ಚೆಂಡೆಲ್ ಹಾಗೂ ದಾಮೋದರ್ ನಾಯರ್ ಬೋಲದ ಪದವು ಇವರು ಒದಗಿಸಿಕೊಟ್ಟ ವರ್ಕಾಡಿ ಬಾವಲಿ ಗುಳಿ ಗಡಿ ಪ್ರದೇಶದ ಸ್ಥಳದಲ್ಲಿ ಗಣೇಶೋತ್ಸವ ನಡೆಸಲಾಗುತ್ತಿತ್ತು ಎಂದರು. ಇದೀಗ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವಾಜ್ ನರಿಂಗಾನ ಹಾಗೂ ಪಂಚಾಯತ್ ಸದಸ್ಯರ ನಿರಂತರ ಶ್ರಮದಿಂದಾಗಿ, ಪ್ರಸ್ತುತ ಜಾಗದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ನರಿಂಗಾನ ಕಂಬಳದ ಬಳಿಯ ರಕ್ತೇಶ್ವರಿ ಗುಡಿಯ ಹತ್ತಿರ ಸರಕಾರದಿಂದ 1 ಎಕರೆ ಜಾಗ ಮಂಜೂರಾಗಿದೆ. ಈ ಅಭಿನಂದನಾರ್ಹ ಕಾರ್ಯಕ್ಕಾಗಿ ಪಂಚಾಯತ್ ಆಡಳಿತಕ್ಕೆ ಸಮಿತಿಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಭವ್ಯ ಸಮಾರಂಭದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ರಂಗದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಉದ್ಯಾವರ ಮಾಡ ಕ್ಷೇತ್ರದ ದರ್ಶನ ಪಾತ್ರಿ ತಿಮಿರಿ ಬೆಳ್ಚಾಪ್ಪಡ, ವೈದ್ಯನಾಥ ದೈವದ ದರ್ಶನ ಪಾತ್ರಿ ಮಂಜು ಬೆಳ್ಚಪ್ಪಾಡ, ಅರಿಬೈಲು ಧೂಮಾವತಿ ದೈವದ ದರ್ಶನ ಪಾತ್ರಿ ಅರಸ ಪೂಜಾರಿ, ಧಾರ್ಮಿಕ ನಾಯಕರಾದ ಶ್ರೀ ಕೃಷ್ಣ ಶಿವ ಕೃಪ ಕುಂಜತ್ತೂರು, ಮಹಮ್ಮದ್ ಹಾರಿಸ್, ಶ್ರೀ ಮಹಾವಿಷ್ಣು ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯ, ಪಂಚಾಯತ್ ಮಾಜಿ ಅಧ್ಯಕ್ಷ ಜೋಸೆಫ್ ಕುಟಿನ್ನ, ಬಿಜೆಪಿ ಮುಖಂಡ ಜಗದೀಶ್ ಅಳ್ವ ಕುವೆತ್ತ ಬೈಲು, ಸುಂಕದಕಟ್ಟೆ ಸಮಿತಿ ಉಪಾಧ್ಯಕ್ಷ ಆನಂದ ತಚ್ಚಿರೆ, ಕೊಂಡೆವೂರು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸೋಮನಾಥ ಕಾರಂತ, ಪಾವೂರು ಪೊಯ್ಯೆ ಚಾಮುಂಡೇಶ್ವರಿ ಕ್ಷೇತ್ರದ ವಿನೋದ್ ಕುಮಾರ್ ರೇಂಜೇಪಡ್ಪು, ಬ್ರಹ್ಮ ಮೊಗೆರ ಸಮಿತಿಯ ಶೀನ ಬೋಲದ ಪದವು, ದೈವ ನರ್ತನಕಾರ ಐತ್ತಪ್ಪ ಮರಿಕಾಪು, ನರಿಂಗಾನ ಗ್ರಾ.ಪಂ. ಸದಸ್ಯ ಸುಂದರ ಪೂಜಾರಿ ಹಾಗೂ ಸಮಿತಿಯ ಪ್ರಮುಖರಾದ ಮೋಹನ ಕಾರಂತ, ಶಂಕರನಾರಾಯಣ ಹೊಳ್ಳ, ಐತ್ತಪ್ಪ ಶೆಟ್ಟಿ, ಮನೋಹರ ಶೆಟ್ಟಿ, ವಿವೇಕಾನಂದ ರೈ, ಗಣೇಶ್ ಚೆಂಡೇಲ್, ಚಂದ್ರಹಾಸ ಶೆಟ್ಟಿ, ಪ್ರೇಮಾನಂದ ರೈ, ಜಗನ್ನಾಥ ಶೆಟ್ಟಿ, ನವೀನ್ ಶೆಟ್ಟಿ, ರಾಮಣ್ಣ ಶೆಟ್ಟಿ, ಗಿರೀಶ್ ಆಳ್ವ, ದಾಮೋದರ ನಾಯರ್ ಮತ್ತು ಸತೀಶ್ ಮಲಿ ಮೊದಲಾದವರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು ಸ್ವಾಗತಿಸಿ, ಸಂಚಾಲಕ ಹರೀಶ್ ಕನ್ನಿಗುಳಿ ವಂದಿಸಿದರು. ಚಂದ್ರಹಾಸ ಸರ್ಕುಡೇಲ್ ಕಾರ್ಯಕ್ರಮ ನಿರೂಪಿಸಿದರು.
2026ರ ಸೆಪ್ಟೆಂಬರ್ 14 ಸೋಮವಾರ
ಬಾವಳಿಗುಳಿ ನರಿಂಗಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭವು 2026ರ ಸೆಪ್ಟೆಂಬರ್ 14 ಸೋಮವಾರದಂದು ಬಾವಳಿಗುಳಿ ವಠಾರದಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ದಿನೇಶ ಕೃಷ್ಣ ತಂತ್ರಿ ವರ್ಕಾಡಿ ಅವರ ದಿವ್ಯಹಸ್ತದಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.
ಬೆಳಿಗ್ಗೆ 6.00 ಗಂಟೆಗೆ ಸ್ಥಳ ಶುದ್ಧಿ, ಪುಣ್ಯಾಹ ಹಾಗೂ ಪ್ರಾರ್ಥನೆಯೊಂದಿಗೆ ಧಾರ್ಮಿಕ ಚಟುವಟಿಕೆಗಳು ಪ್ರಾರಂಭಗೊಂಡು, 8.00 ಗಂಟೆಗೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನೆರವೇರಲಿದೆ. ತದನಂತರ ಭಜನೆ, ದ್ವಾದಶ ನಾಳೀಕೇರ ಗಣಯಾಗ, ಪೂರ್ಣಾಹುತಿ, ಅಲಂಕಾರ ಪೂಜೆ ಹಾಗೂ ಮಹಾಪೂಜೆ ಜರುಗಲಿದ್ದು, ಮಧ್ಯಾಹ್ನ 1.00 ಗಂಟೆಯಿಂದ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ದಿನವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಬೆಳಿಗ್ಗೆ 11.30 ರಿಂದ ದತ್ತಾಂಜನೇಯ ಕಲಾ ಬಳಗ ರಾಮಾಡಿ, ಕಾಣತೀರ್ಥ ತಂಡದವರಿಂದ ‘ಭರತ ವರ್ಷ ವೈಭವ’ ದೇಸಿ ಸಾಂಸ್ಕೃತಿಕ ಸಂಗಮ ನಡೆಯಲಿದೆ. ಮಧ್ಯಾಹ್ನ 1.30 ರಿಂದ ಪ್ರಸಿದ್ಧ ‘ಫ್ರೆಂಡ್ಸ್ ಮಂಗಳೂರು’ ತಂಡದಿಂದ ‘ತೆಲಿಕೆ ಬಾಯಿ ನಿಲಿಕೆ’ ಹಾಸ್ಯ ಕಾರ್ಯಕ್ರಮ ಹಾಗೂ ಸಂಜೆ 3.30 ರಿಂದ ‘ಶ್ರೀ ದುರ್ಗಾ ನಾಟ್ಯಾಲಯ’ ತೌಡುಗೋಳಿ ಇದರ ತ್ರಿಷಾ ಬಿ ಆರ್ ಉದ್ಯಾವರ ಇವರ ಶಿಷ್ಯಂದಿರಿಂದ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಸಂಗಮ ಪ್ರದರ್ಶನಗೊಳ್ಳಲಿದೆ.
ಸಂಜೆ 4.30 ಕ್ಕೆ ನಡೆಯುವ ಸಭಾಂಗಣ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಫರೀದ್ ಅವರಿಗೆ ವಿಶೇಷ ಗೌರವಾಭಿನಂದನೆ ಸಲ್ಲಿಕೆಯಾಗಲಿದೆ. ಇದರೊಂದಿಗೆ ರಾಜರಾಂ ಭಟ್ ಕೈರಂಗಳ, ನವಾಜ್ ನರಿಂಗಾನ, ಪ್ರಶಾಂತ್ ಕಾಜವ, ಚಂದ್ರಹಾಸ ಶೆಟ್ಟಿ ಮೋರ್ಲ, ಕೃಷ್ಣ ಶಿವಕೃಪಾ ಕುಂಜತ್ತೂರು, ಸಂತೋಷ್ ಕುಮಾರ್ ರೈ ಬೊಳಿಯಾರು, ಜೆ.ಪಿ. ತೂಮಿನಾಡು ಹಾಗೂ ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು.
ಸಂಜೆ 5.30 ಕ್ಕೆ ಯಾತ್ರಾಪೂಜೆ ನೆರವೇರಿ, 6.00 ಗಂಟೆಗೆ ವರ್ಣರಂಜಿತ ಸುಡುಮದ್ದು ಪ್ರದರ್ಶನದೊಂದಿಗೆ ಶ್ರೀ ಗಣೇಶ ದೇವರ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಸಿಂಗಾರಿಮೇಳ, ಸ್ಥಬ್ದಚಿತ್ರಗಳು, ನಾಸಿಕ್ ಮೇಳ ಹಾಗೂ ಮಾಧವ ಮಾಸ್ಟರ್ ಬಡಾಜೆ ನೇತೃತ್ವದಲ್ಲಿ ತಾಲಿಮು ಪ್ರದರ್ಶನದೊಂದಿಗೆ ಉತ್ಸವ ವೇದಿಕೆಯಿಂದ ಹೊರಡುವ ಮೆರವಣಿಗೆಯು ಬೋಳ ಚರ್ಚ್, ನೆತ್ತಿಲಪದವು, ಕೆದುಂಬಾಡಿ, ತೌಡುಗೋಳಿ ಮಾರ್ಗವಾಗಿ ಸಾಗಿ ಸಾಂತಿಪಳಿಕೆ ಮಾರಿಗುಡಿ ಬಳಿಯ ಕೆರೆಯಲ್ಲಿ ಶ್ರೀ ಗಣಪತಿ ವಿಗ್ರಹ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









