ನವದೆಹಲಿ: ದಕ್ಷಿಣ ಕನ್ನಡ, ಕರಾವಳಿ ಹಾಗೂ ಮಲೆನಾಡು ಭಾಗಗಳ ಪ್ರಮುಖ ಆದಾಯ ಮೂಲವಾಗಿರುವ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಹವಾಮಾನ ವೈಪರೀತ್ಯದಿಂದಾಗಿ ಎದುರಿಸುತ್ತಿರುವ ತೀವ್ರ ಸಂಕಷ್ಟವನ್ನು ಕೇಂದ್ರ ಸರ್ಕಾರ ತಕ್ಷಣ ಗಮನಿಸಬೇಕಿದೆ. ಈ ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳ ಸವಾಲುಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಸಾಂಪ್ರದಾಯಿಕ ಮಾದರಿಯ ವಿಮೆಗಳಿಂದ ರೈತರಿಗೆ ಪೂರ್ಣ ಪರಿಹಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಇರುವ ‘ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ಯನ್ನು (RWBCIS) ಅಲ್ಲಿನ ನೈಜ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ತಕ್ಷಣವೇ ಪರಿಷ್ಕರಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಲೋಕಸಭೆಯ ನಿಯಮ 377ರ ಅಡಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಸಾಮಾನ್ಯ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಮಳೆ ಅಥವಾ ತಾಪಮಾನದ ಪ್ರಮಾಣ ನಿಯಮಿತ ಮಿತಿಯಲ್ಲೇ ಇದ್ದರೂ, ತೋಟಗಳಲ್ಲಿ ನಿರಂತರ ಸುರಿಯುವ ಮಳೆ, ಗಾಳಿಯಲ್ಲಿನ ತೇವಾಂಶ, ನೀರು ನಿಲ್ಲುವಿಕೆ ಹಾಗೂ ಹರಡುವ ವಿವಿಧ ರೋಗಬಾಧೆಗಳಿಂದ ಬೆಳೆಗಳು ಸಂಪೂರ್ಣ ನಾಶವಾಗುತ್ತವೆ. ಹತ್ತಿರದ ಮಾಪನ ಕೇಂದ್ರದ ಆಧಾರದ ಮೇಲೆ ನಷ್ಟವನ್ನು ಅಳೆಯುವುದರಿಂದ ರೈತರಿಗೆ ನೈಜ ಪರಿಹಾರ ಸಿಗುತ್ತಿಲ್ಲವಾದ್ದರಿಂದ, ತೋಟಗಾರಿಕಾ ಬೆಳೆಗಾರರು ಅನುಭವಿಸುವ ನೈಜ ನಷ್ಟದ ಸ್ವರೂಪಕ್ಕನುಗುಣವಾಗಿ ವಿಮಾ ಕವರ್ ಹಾಗೂ ನಿಯಮಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ ಎಂದು ಸಂಸದರು ಪ್ರತಿಪಾದಿಸಿದರು.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಕೃಷಿ ಸಚಿವಾಲಯವು ಕೃಷಿ ವಿಜ್ಞಾನಿಗಳು ಮತ್ತು ವಿಮಾ ಪರಿಣಾಯಕರ ಜಂಟಿ ಸಮಿತಿಯನ್ನು ತಕ್ಷಣವೇ ರಚಿಸಬೇಕು. ಈ ಸಮಿತಿಯು ಹವಾಮಾನ ಕೇಂದ್ರಗಳ ಸಾಂದ್ರತೆ ಹೆಚ್ಚಿಸುವುದು, ಅಧಿಸೂಚಿತ ಯೂನಿಟ್ಗಳ ಗಾತ್ರ ಮರುನಿರ್ಧಾರ, ತೇವಾಂಶ ಹಾಗೂ ಮಳೆಯ ನಿಖರ ಮಾನಿಟರಿಂಗ್ ವ್ಯವಸ್ಥೆ ರೂಪಿಸುವುದು, ವಿಮಾ ಮೊತ್ತ ಮತ್ತು ಪರಿಹಾರ ಪಾವತಿಯ ಕಾಲಮಿತಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು. ಈ ಇಡೀ ಪ್ರಕ್ರಿಯೆಯಲ್ಲಿ ICAR ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ವಿಮಾ ಸಂಸ್ಥೆಗಳು, ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಬೆಳೆಗಾರರ ಒಕ್ಕೂಟಗಳನ್ನು ಸಕ್ರಿಯವಾಗಿ ಭಾಗಿಯಾಗಿಸಬೇಕು.
ರಾಷ್ಟ್ರಮಟ್ಟದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರುವ ಮುನ್ನ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಬೇಕು. ಕ್ಲೈಮ್ ಪಾವತಿಯ ಟ್ರಿಗರ್ ಆಧಾರಿತ ಮಾಹಿತಿಯನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸುವುದರ ಜೊತೆಗೆ, ಸೂಕ್ತ ತೋಟಗಾರಿಕಾ ಬೆಳೆಗಳನ್ನು ಯೋಜನೆಯಡಿ ತರಲು ರಾಜ್ಯ ಸರ್ಕಾರಗಳಿಗೆ ಮಾದರಿ ಅಧಿಸೂಚನೆ ಟೆಂಪ್ಲೇಟ್ ಹಾಗೂ ನಿರ್ದಿಷ್ಟ ಕಾಲಮಿತಿಯನ್ನು ಕಲ್ಪಿಸಿಕೊಡಬೇಕೆಂದು ಅವರು ಸಲಹೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









