ಮಂಗಳೂರು : ಕರ್ನಾಟಕ ಸರ್ಕಾರದ ‘ರಿತು ತಾರಾ’ ಯೋಜನೆಯು ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರಲ್ಲಿ ಋತುಚಕ್ರದ ನೈರ್ಮಲ್ಯ, ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡ ಅತ್ಯಂತ ಪ್ರಶಂಸನೀಯ ಕಾರ್ಯಕ್ರಮವಾಗಿದೆ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಎಸ್. ಗಟ್ಟಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಟ್ಟಿನ ಬಗ್ಗೆ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆಗಳು ಹಾಗೂ ಹಿಂಜರಿಕೆಯನ್ನು ತೊಡೆದುಹಾಕಿ, ಶಾಲೆಗಳಲ್ಲಿ ಹೆಣ್ಣುಮಕ್ಕಳ ಹಾಜರಾತಿಗೆ ಯಾವುದೇ ಧಕ್ಕೆಯಾಗದಂತೆ ವೈಜ್ಞಾನಿಕ ಮಾಹಿತಿಯನ್ನು ನೀಡುವುದು ಈ ಯೋಜನೆಯ ಆಶಯವಾಗಿದೆ ಎಂದು ವಿವರಿಸಿದರು.
ಸುರಕ್ಷಿತ ಸ್ಯಾನಿಟರಿ ಪ್ಯಾಡ್ಗಳ ವಿತರಣೆಯೊಂದಿಗೆ ಪರಿಸರ ಸ್ನೇಹಿಯಾಗಿರುವ ಮೆನ್ಸ್ಟ್ರುವಲ್ ಕಪ್ಗಳ ಬಳಕೆಯ ಬಗ್ಗೆಯೂ ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಇದರ ಜೊತೆಗೆ, ಮಹಿಳೆಯರು ತಮ್ಮ ಇಳಿವಯಸ್ಸಿನಲ್ಲಿ ಅನುಭವಿಸುವ ‘ಮೆನೋಪಾಸ್’ (ಋತುಬಂಧ) ಹಂತದಲ್ಲಿ ಎದುರಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಕುರಿತು ಸೂಕ್ತ ವೈದ್ಯಕೀಯ ಮಾಹಿತಿ ಮತ್ತು ಮುಕ್ತ ಸಂವಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಕಿಶೋರಿಯರಿಂದ ಹಿಡಿದು ನಡು ವಯಸ್ಸಿನ ಮಹಿಳೆಯರವರೆಗೆ ಸಮಗ್ರ ಆರೋಗ್ಯ ಸುರಕ್ಷತೆ ಮತ್ತು ಆತ್ಮವಿಶ್ವಾಸ ಒದಗಿಸುವ ಈ ಪ್ರಯತ್ನಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂಚಲಾಕ್ಷಿ ತೇಜೋಮಯ, ವಿಜಯಲಕ್ಷ್ಮೀ ಶೆಟ್ಟಿ, ಸುಮಾ ಮಾನ್ವಿ ಹಾಗೂ ಪ್ರೇಮಲತಾ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









