ಮಂಗಳೂರು : ಆಧುನಿಕ ಸ್ಪರ್ಧಾತ್ಮಕ ಯಗದಲ್ಲಿ ಯುವಜನತೆ ಉನ್ನತ ವ್ಯಾಸಂಗ ಪೂರ್ಣಗೊಳಿಸಿ, ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಲು ನಿರ್ದಿಷ್ಟ ಗುರಿ ಹಾಗೂ ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಪ್ರತಿಮ್ ಕುಮಾರ್ ತಿಳಿಸಿದರು.
ಮಂಗಳೂರಿನ ಭಾರತ್ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ‘ಯುವ ದಿಕ್ಸೂಚಿ-2026’ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಾಗಾರವನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ ಮಾಣಿ ಘಟಕದ ಆತಿಥ್ಯದೊಂದಿಗೆ B.E.W.S ಮಂಗಳೂರು ಹಾಗೂ ಭಾರತ್ ಸ್ಕೌಟ್ಸ್ & ಗೈಡ್ಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಯುವಜನರಿಗೆ ಅಗತ್ಯ ಪರೀಕ್ಷಾ ತಂತ್ರಗಳು, ವಿಷಯಾಧಾರಿತ ಮಾಹಿತಿ ಮತ್ತು ಸಮಯ ನಿರ್ವಹಣೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು. ಬೆಂಗಳೂರಿನ ಪ್ರಸಿದ್ಧ ಬ್ಯಾಂಕಿಂಗ್ ತರಬೇತುದಾರ ಆರ್.ಕೆ. ಬಾಲಚಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯುವಜನರಿಗೆ ನಿಖರವಾಗಿ ಪ್ರಶ್ನೆ ಬಿಡಿಸುವ ವಿಧಾನ ಹಾಗೂ ಪರೀಕ್ಷಾ ಯಶಸ್ಸಿನ ಸೂತ್ರಗಳನ್ನು ತಿಳಿಸಿಕೊಟ್ಟರು. ಮುಖ್ಯ ಅತಿಥಿಯಾಗಿ ಬಿ.ಇ.ಡಬ್ಲ್ಯೂ.ಎಸ್ ಅಧ್ಯಕ್ಷ ರಾಜೇಶ್ ಬಿ. ಹಾಗೂ ಗೌರವ ಉಪಸ್ಥಿತಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ ಪಣಂಬೂರು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಕೇಶವ ಅಂಚನ್, ಮಾಜಿ ಅಧ್ಯಕ್ಷರುಗಳು ಹಾಗೂ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ಮಾಣಿ ಘಟಕದ ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರೆ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಧನ್ಯವಾದ ಸಮರ್ಪಿಸಿದರು. ಯುವಜನರಲ್ಲಿ ಆತ್ಮವಿಶ್ವಾಸ ಮೂಡಿಸಿ, ಶೈಕ್ಷಣಿಕ ಹಾಗೂ ವೃತ್ತಿ ಭವಿಷ್ಯಕ್ಕೆ ಸ್ಪಷ್ಟ ದಾರಿ ತೋರಿಸುವಲ್ಲಿ ಈ ತರಬೇತಿ ಕಾರ್ಯಾಗಾರ ಯಶಸ್ವಿಯಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









