ಮಂಗಳೂರು : ಸೂಟರ್ಪೇಟೆ ನಿವಾಸಿ ಹಾಗೂ ನಾಡಿನ ಹೆಸರಾಂತ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಅವರು ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ತನ್ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕನ್ನಡ ನಾಡಿಗೆ ಅವರು ನೀಡಿದ ಅನುಪಮ ಕ್ರೀಡಾ ಸಾಹಿತ್ಯ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಕಳೆದ 32 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ಜಿಲ್ಲೆ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ 4,500 ಕ್ಕೂ ಹೆಚ್ಚು ಕ್ರೀಡಾ ಲೇಖನಗಳು ಹಾಗೂ ಅಂಕಣಗಳನ್ನು ಬರೆದಿದ್ದಾರೆ. ಕ್ರೀಡಾ ಕ್ಷೇತ್ರದ ಬೆಳವಣಿಗೆ, ಸಾಧನೆಗಳ ಕುರಿತು ವಿಮರ್ಶಾತ್ಮಕ ಹಾಗೂ ವಿಶ್ಲೇಷಣಾತ್ಮಕ ಬರಹಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ರೀಡಾ ಬರಹಗಳ ಜೊತೆಗೆ ಸಾಹಿತ್ಯದಲ್ಲೂ ತೊಡಗಿಸಿಕೊಂಡಿರುವ ಇವರು ಇತ್ತೀಚೆಗಷ್ಟೇ ‘ತ್ಯಾಗಮಯಿ ಮೋಹಳ್ಳಿ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದ್ದರು. ಇವರ ಈ ಸುದೀರ್ಘ ಕ್ರೀಡಾ ಪತ್ರಿಕೋದ್ಯಮದ ಸೇವೆಗೆ ಈಗಾಗಲೇ ಹಲವು ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಒಲಿದುಬಂದಿವೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 29 ರಂದು ಬೆಂಗಳೂರಿನ ಜೆಎಸ್ಎಸ್ ಸಭಾಂಗಣದಲ್ಲಿ ಜರುಗಲಿದೆ. ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಜಗದೀಶ್ಚಂದ್ರ ಅಂಚನ್ ಅವರಿಗೆ ಈ ‘ಬಸವಶ್ರೀ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ನ ಕಾರ್ಯದರ್ಶಿ ಎಲ್. ಸೋಮಶೇಖರ್ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









