ಮಂಗಳೂರು : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಅತ್ಯಂತ ಶಾಂತಿಯುತ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನಡೆಸಲು ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ. ಉಭಯ ಜಿಲ್ಲೆಗಳಾದ್ಯಂತ ಸಹಸ್ರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳು ಮತ್ತು ವಿಸರ್ಜನಾ ಮಾರ್ಗಗಳ ಮೇಲೆ ಬಿಗಿ ಕಣ್ಗಾವಲು ಇರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 174 ಸ್ಥಳಗಳು ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯ 230 ಸ್ಥಳಗಳು ಸೇರಿದಂತೆ ಒಟ್ಟು 404 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಯೋಜಿಸಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತರ (6), ದಕ್ಷಿಣ (14), ಪೂರ್ವ (13), ಗ್ರಾಮಾಂತರ (12), ಕಂಕನಾಡಿ (6), ಉರ್ವ (5), ಬರ್ಕೆ (5), ಪಣಂಬೂರು (7), ಕಾವೂರು (15), ಬಜಪೆ (11), ಸುರತ್ಕಲ್ (15), ಮೂಲ್ಕಿ (18), ಮೂಡುಬಿದಿರೆ (29), ಉಳ್ಳಾಲ (10) ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ 8 ಕಡೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಉಪವಿಭಾಗವು ಅತ್ಯಂತ ಹೆಚ್ಚು ಅಂದರೆ 103 ಪ್ರತಿಷ್ಠಾಪನೆಗಳಿಗೆ ಸಾಕ್ಷಿಯಾಗಲಿದೆ. ಇದರಲ್ಲಿ ಬೆಳ್ತಂಗಡಿ (25), ಧರ್ಮಸ್ಥಳ (20), ವೇಣೂರು (20), ಉಪ್ಪಿನಂಗಡಿ (18), ಕಡಬ (13) ಹಾಗೂ ಪುಂಜಾಲಕಟ್ಟೆ (7) ಸೇರಿವೆ. ಪುತ್ತೂರು ಉಪವಿಭಾಗದಲ್ಲಿ ಬೆಳ್ಳಾರೆ (18), ಪುತ್ತೂರು ಗ್ರಾಮಾಂತರ (17), ಸುಳ್ಯ (17), ಪುತ್ತೂರು ನಗರ (16) ಮತ್ತು ಸುಬ್ರಹ್ಮಣ್ಯ (11) ಸೇರಿದಂತೆ ಒಟ್ಟು 79 ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಬಂಟ್ವಾಳ ಉಪವಿಭಾಗದ ವಿಟ್ಲ (20), ಬಂಟ್ವಾಳ ಗ್ರಾಮಾಂತರ (16) ಹಾಗೂ ಬಂಟ್ವಾಳ ನಗರ (12) ಸೇರಿದಂತೆ ಒಟ್ಟು 48 ಸ್ಥಳಗಳಲ್ಲಿ ಉತ್ಸವ ನಡೆಯಲಿದೆ. ಭದ್ರತೆಗಾಗಿ 1 ಹೆಚ್ಚುವರಿ ಎಸ್ಪಿ, 4 ಡಿವೈಎಸ್ಪಿ, 7 ಪಿಐ/ಸಿಪಿಐ, 34 ಪಿಎಸ್ಐ, 52 ಎಎಸ್ಐ, 520 ಸಿಬ್ಬಂದಿ, 150 ಗೃಹರಕ್ಷಕರು ಹಾಗೂ ತಲಾ 5 ಕೆಎಸ್ಆರ್ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಇನ್ನೊಂದೆಡೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು 492 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಭದ್ರತೆಯ ದೃಷ್ಟಿಯಿಂದ 415 ಸ್ಥಳಗಳನ್ನು ಸಾಮಾನ್ಯ, 74 ಸ್ಥಳಗಳನ್ನು ಸೂಕ್ಷ್ಮ ಹಾಗೂ 3 ಪ್ರದೇಶಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈಗಾಗಲೇ 22 ಶಾಂತಿ ಸಮಿತಿ ಸಭೆಗಳನ್ನು ನಡೆಸಿದ್ದು, 611 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ ಹಾಗೂ 487 ಜನರಿಂದ ಮುಚ್ಚಳಿಕೆ ಪಡೆದುಕೊಂಡಿದ್ದಾರೆ. ಅಧಿಕೃತ ಮಾರ್ಗಗಳಲ್ಲೇ ವಿಸರ್ಜನಾ ಮೆರವಣಿಗೆ ನಡೆಸಿ, ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗದಂತೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಕಾರಿ ನಡವಳಿಕೆಗಳಿಂದ ದೂರವಿರಲು ಪೊಲೀಸರು ಸೂಚಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









