ಮಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣ ಹೆಸರಿನಲ್ಲಿ ಅವಮಾನಿಸಿದ ಬಿಜೆಪಿ ನಡವಳಿಕೆ ಹಾಗೂ ಇದನ್ನು ಪ್ರಶ್ನಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಉತ್ತರಾಖಂಡ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ‘ಗಾಂಧಿ ಸತ್ಯಾಗ್ರಹ’ ಧರಣಿ ನಡೆಯಿತು. ಈ ಸಂದರ್ಭದಲ್ಲಿ ಕಳೆದ 12 ವರ್ಷಗಳ ಕೇಂದ್ರ ಎನ್ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಯುವಜನರ ಉದ್ಯೋಗ, ಶಿಕ್ಷಣ, ನೇಮಕಾತಿ ಅಕ್ರಮಗಳು ಹಾಗೂ ಭವಿಷ್ಯದ ಭದ್ರತೆ ಒದಗಿಸುವಲ್ಲಿ ಆದ ಸಾಲು ಸಾಲು ವೈಫಲ್ಯಗಳನ್ನು ನಿಯೋಗದ ನಾಯಕರು ಬಲವಾಗಿ ಪ್ರಶ್ನಿಸಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ದಲಿತ ಹಾಗೂ ಶ್ರಮಿಕ ವರ್ಗದಿಂದ ಬಂದು ರಾಜ್ಯದ ಸಚಿವರಾಗಿ, ಅಕ್ರಮ-ಸಕ್ರಮ ಮತ್ತು ಭೂ ಸುಧಾರಣೆ ಕಾಯ್ದೆಗಳ ಮೂಲಕ ಲಕ್ಷಾಂತರ ಬಡವರಿಗೆ ಜಮೀನು-ನಿವೇಶನ ಒದಗಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಂಗಾಜಲ ಪ್ರೋಕ್ಷಣೆ ಹೆಸರಿನಲ್ಲಿ ಬಿಜೆಪಿ ಅವಮಾನಿಸಿದೆ. ಇದು ಕೇವಲ ಒಬ್ಬ ನಾಯಕನಿಗೆ ಮಾಡಿದ ಅವಮಾನವಲ್ಲ, ದೇಶದ 144 ಕೋಟಿ ಜನತೆಗೆ ಹಾಗೂ ಭಾರತದ ಸಂವಿಧಾನಕ್ಕೆ ಎಸಗಿದ ಘೋರ ಅಪಚಾರವಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತು ಈಡೇರಿಲ್ಲ. ಸಂವಿಧಾನದ 17ನೇ ವಿಧಿಯಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ರಾಹುಲ್ ಗಾಂಧಿ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ‘ಕಳ್ಳರಿಗೆ ರಕ್ಷಣೆ ಕೊಟ್ಟು, ಪೊಲೀಸರಿಗೆ ಜೈಲು ಶಿಕ್ಷೆ ವಿಧಿಸುವ’ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಕಡಾಖಂಡಿತವಾಗಿ ಆರೋಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









