ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದ ಸುತ್ತಮುತ್ತ ಅಳವಡಿಸಲಾಗಿರುವ ಮೊಬೈಲ್ ಜಾಮರ್ಗಳಿಂದ ಎದುರಾಗುತ್ತಿರುವ ನೆಟ್ವರ್ಕ್ ಸಮಸ್ಯೆ ಹಲವು ದಿನಗಳಿಂದ ಬಗೆಹರಿಯದೆ ಉಳಿದಿದೆ. ಈ ಗಂಭೀರ ಸಮಸ್ಯೆಯನ್ನು ಖಂಡಿಸಿ, ಮಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸಚಿವ ಸಂಪುಟ ಸಭೆಯ ಸ್ಥಳಕ್ಕೆ ಮುತ್ತಿಗೆ ಹಾಕಲು ವಕೀಲರು ಮುಂದಾದಾಗ ನಗರದಲ್ಲಿ ತೀವ್ರ ಉದ್ವಿಗ್ನತೆ ಉಂಟಾಯಿತು.
ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಅವರ ನೇತೃತ್ವದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕಾರಾಗೃಹವು ನ್ಯಾಯಾಲಯದ ಸಂಕೀರ್ಣದ ಪಕ್ಕದಲ್ಲೇ ಇರುವುದರಿಂದ ನಿರಂತರವಾಗಿ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದ ಸುಮಾರು 300 ವಕೀಲರ ತಂಡವು ಮುತ್ತಿಗೆ ಚಳವಳಿಯಲ್ಲಿ ಭಾಗವಹಿಸಲು ಸಜ್ಜಾಗಿತ್ತು.
ಪ್ರತಿಭಟನೆಯ ವೇಳೆ ಮಾತನಾಡಿದ ಜಗದೀಶ್ ಶೇಣವ ಅವರು, ಯಾವುದೇ ಕಾರಣಕ್ಕೂ ತಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರ್ಯಾಪಿಡ್ ಆಕ್ಷನ್ ಫೋರ್ಸ್ ತಡೆಯಾಗಲಿ ಅಥವಾ ಗೋಲಿಬಾರ್ಗೆ ಎದುರಾಗಬೇಕಾಗಿ ಬಂದರೂ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕುವುದು ಖಚಿತ ಎಂದು ಎಚ್ಚರಿಸಿದ್ದರು.
ಸ್ಥಳದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಕೋರ್ಟ್ ಆವರಣದಲ್ಲಿ ಹೈಡ್ರಾಮಾಗೆ ಕಾರಣವಾಗಿದ್ದ ವಕೀಲರನ್ನು ಬಲವಂತವಾಗಿ ವಶಕ್ಕೆ ಪಡೆದರು. ಇದರಿಂದಾಗಿ ಕೋರ್ಟ್ ಆವರಣದ ಸುತ್ತಮುತ್ತ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









