ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯು ಮಂಗಳೂರಿನ ನೂತನ ಪ್ರಜಾಸೌಧ (ಜಿಲ್ಲಾಧಿಕಾರಿ ಕಚೇರಿ) ಸಭಾಂಗಣದಲ್ಲಿ ಆಯೋಜನೆಗೊಂಡಿದ್ದು, ಈ ಮೂಲಕ ಕರಾವಳಿ ಹಾಗೂ ಇಡೀ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಸಿಗಲಿದೆ ಎಂದು ಸಚಿವ ಯು. ಟಿ. ಖಾದರ್ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೊರಗೆ ಸಚಿವ ಸಂಪುಟ ಸಭೆ ನಡೆಸುವುದಾದರೆ ಅದನ್ನು ಪ್ರಥಮ ಬಾರಿಗೆ ಕರಾವಳಿಯಲ್ಲೇ ನಡೆಸಬೇಕೆಂಬ ನಮ್ಮ ಮನವಿಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸ್ಪಂದಿಸಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ನಗರದ ಪಂಪ್ವೆಲ್ನಲ್ಲಿ ಆಗಮಿಸುವ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರನ್ನು ಸಾರ್ವಜನಿಕರ ಸಹಕಾರದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಕದ್ರಿ ದೇವಸ್ಥಾನದಿಂದ ಓಪನ್ ಬಸ್ ಮೂಲಕ ಜನಪ್ರತಿನಿಧಿಗಳು ಮೆರವಣಿಗೆಯಂತೆ ಸಾಗುವ ಯೋಜನೆಯಿದ್ದು, ಆಗಮಿಸುವ ಎಲ್ಲಾ ಅತಿಥಿಗಳಿಗೆ ತುಳುನಾಡಿನ ಸಾಂಪ್ರದಾಯಿಕ ವೈವಿಧ್ಯಮಯ ಖಾದ್ಯಗಳ ವಿಶೇಷ ಆತಿಥ್ಯ ನೀಡಲಾಗುತ್ತದೆ. ಇದೇ ವೇಳೆ ಜೈಲ್ ಜಾಮರ್ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಅತಿಥಿಗಳಿಗೆ ಮುತ್ತಿಗೆ ಹಾಕುವುದು ಕರಾವಳಿಯ ಸಂಸ್ಕೃತಿಗೆ ಶೋಭೆಯಲ್ಲ, ಆದ್ದರಿಂದ ಪ್ರತಿಭಟನೆಯನ್ನು ತಕ್ಷಣವೇ ಕೈಬಿಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಭಟ್ಕಳದ ಮಸೀದಿಯೊಂದರ ಮೇಲೆ ನಡೆದ ಕಲ್ಲು ತೂರಾಟ ಘಟನೆಯನ್ನು ಖಂಡಿಸಿದ ಸಚಿವರು, ಕರಾವಳಿ ಭಾಗದ ಜನರು ಶಾಂತಿ, ಸೌಹಾರ್ದತೆ ಮತ್ತು ಪ್ರೀತಿಯಿಂದ ಜೀವನ ನಡೆಸುವ ಪರಂಪರೆ ಹೊಂದಿದ್ದಾರೆ ಎಂದು ಸ್ಮರಿಸಿದರು. ಯಾವುದೇ ಧಾರ್ಮಿಕ ಹಬ್ಬ-ಹರಿದಿನಗಳಾಗಿದ್ದರೂ ಎಲ್ಲಾ ಸಮುದಾಯದ ಜನರು ಒಂದಾಗಿ ಆಚರಿಸುವ ಸೌಹಾರ್ದ ವಾತಾವರಣ ನಮ್ಮಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳು ಇಂತಹ ದುಷ್ಕೃತ್ಯಗಳನ್ನು ಎಸಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಕೃತ್ಯ ಎಸಗಿದ ಅಪರಾಧಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಸಮಾಜದ ಶಾಂತಿ ಕದಡುವ ಕೋಮುವಾದಿಗಳಿಗೆ ಯಾವುದೇ ಜಾತಿ ಅಥವಾ ಧರ್ಮವಿರುವುದಿಲ್ಲ, ಅವರು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದ ಅಪರಾಧಿಗಳಷ್ಟೇ ಎಂದು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









