ಮಂಗಳೂರು : ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ದರ್ಜೆಯ ಸ್ಪರ್ಶ ನೀಡಲು ಮುಂದಾಗಿರುವ ಕರ್ನಾಟಕ ಸರ್ಕಾರವು, ದುಬೈನ ಫ್ರೇಮ್ ಹಾಗೂ ಪ್ಯಾರಿಸ್ನ ಐಫೆಲ್ ಟವರ್ ಮಾದರಿಯಲ್ಲೇ ಮಂಗಳೂರಿನಲ್ಲಿ ಬೃಹತ್ ಗಗನಚುಂಬಿ ಗೋಪುರ ನಿರ್ಮಿಸಲು ಯೋಜನೆ ರೂಪಿಸಿದೆ. ನಗರದ ಕದ್ರಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸುಮಾರು ಐದು ಎಕರೆ ಭೂಮಿಯಲ್ಲಿ 42 ಅಂತಸ್ತುಗಳ ‘ಮಂಗಳೂರು ಐ’ ತಲೆಎತ್ತಲಿದೆ. ಸುಮಾರು 200 ಮೀಟರ್ ಎತ್ತರವಿರುವ ಈ ಐಕಾನ್ ಟವರ್ ಅನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಹಾಗೂ ವಿಜಿಎಫ್ ಮಾದರಿಯಲ್ಲಿ ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಬೀಚ್ ಹಾಗೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿ, ಅವರನ್ನು ನಗರದಲ್ಲಿ ಕನಿಷ್ಠ ಒಂದೆರಡು ದಿನಗಳ ಕಾಲ ಉಳಿದುಕೊಳ್ಳುವಂತೆ ಮಾಡುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಬೃಹತ್ ಸಂಕೀರ್ಣದ ಒಂದೇ ಸೂರಿನಡಿ ಪ್ರವಾಸೋದ್ಯಮ, ಆತಿಥ್ಯ, ವಾಣಿಜ್ಯ, ಸಂಸ್ಕೃತಿ, ಮನರಂಜನೆ ಹಾಗೂ ನಾಗರಿಕ ಮೂಲಸೌಕರ್ಯಗಳು ಲಭ್ಯವಿರಲಿವೆ. ಇಲ್ಲಿ ಶಾಪಿಂಗ್ ಸೆಂಟರ್ಗಳು, ಸಭಾಂಗಣ, ಆಹಾರ ಅಂಗಳಗಳು, ಆಕಾಶ ಪಥ (ಸ್ಕೈ ವಾಕ್), 360 ಡಿಗ್ರಿ ತಿರುಗುವ ರೆಸ್ಟೋರೆಂಟ್, ಒಳಾಂಗಣ ಮತ್ತು ಹೊರಾಂಗಣ ವೀಕ್ಷಣಾ ಅಂಗಳಗಳು ಹಾಗೂ ಮೇಲ್ಭಾಗದಲ್ಲಿ ದೀಪಸ್ತಂಭವನ್ನು ಅಳವಡಿಸಲು ಯೋಜಿಸಲಾಗಿದೆ.
ಹಲವು ವರ್ಷಗಳಿಂದ ಬಳಕೆಯಾಗದೆ ಪಾಳುಬಿದ್ದಿದ್ದ ಕದ್ರಿಯ ಭೂಮಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿಂದೆ ಇಲ್ಲಿ ಹೆಲಿಪ್ಯಾಡ್ ಅಥವಾ ಉದ್ಯಾನವನ ನಿರ್ಮಿಸುವ ಪ್ರಸ್ತಾಪವಿತ್ತಾದರೂ, ವಿದ್ಯುತ್ ತಂತಿ ಹಾಗೂ ಆಕಾಶವಾಣಿ ಕೇಂದ್ರದ ಕಾರಣಗಳಿಂದ ಅವು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ದುಬೈ ಫ್ರೇಮ್ನಂತೆ ಜಾಗತಿಕ ಮಟ್ಟದ ಮಾದರಿಯನ್ನು ಆಧರಿಸಿ, ಇಡೀ ಮಂಗಳೂರು ನಗರದ ಸೌಂದರ್ಯ ಹಾಗೂ ಕರಾವಳಿಯ ವಿಹಂಗಮ ನೋಟವನ್ನು ಒದಗಿಸುವ ಕಲ್ಪನೆಯೊಂದಿಗೆ ಈ ಗೋಪುರವನ್ನು ನಿರ್ಮಿಸಲಾಗುತ್ತಿದ್ದು, ಕರಾವಳಿಯ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೊಸ ವೇಗ ದೊರೆಯಲಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









