ಮಂಗಳೂರು : ಮೈಸೂರು ದಸರಾ ಉತ್ಸವದ ಅಂಗವಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸಲಾಗುತ್ತಿದ್ದು ಮೈಸೂರಿನ ಸುಮಾರು 20 ಎಕರೆ ಪ್ರದೇಶದಲ್ಲಿ ಅ.18 ಮತ್ತು 19ರಂದು ‘ವಿಜಯ- ದಶಮಿ’ ಹೆಸರಿನ ಕರೆಯಲ್ಲಿ ಸರಕಾರದ ವತಿಯಿಂದ ಕಂಬಳ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಂಬಳದ ಬಗ್ಗೆ ಮಾಹಿತಿ ನೀಡಿದ ಅವರು, ಏಕಕಾಲದಲ್ಲಿ ಸುಮಾರು 15 ಸಾವಿರ ಮಂದಿ ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣವಾಗುತ್ತಿದೆ ಎಂದರು.
ಕಂಬಳದ ಸಂದರ್ಭದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು ಮುಖ್ಯ ವೇದಿಕೆಯಲ್ಲಿ ರ್ಸಾ ೯ಜನಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದ ಎರಡು ವೇದಿಕೆಗಳಲ್ಲಿ ಗಣ್ಯರು ಹಾಗೂ ಅತಿಥಿಗಳಿಗಾಗಿ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿದಿನ ಮೂರು ಅವಧಿಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಬ್ಯಾಚ್ಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಕಂಬಳ ಸಮಿತಿಯ ಪ್ರಮುಖರು ಈಗಾಗಲೇ ಕರಾವಳಿ ಭಾಗಕ್ಕೆ ಭೇಟಿ ನೀಡಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು, ಕೋಣಗಳ ಮಾಲೀಕರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿದ್ದಾರೆ. ಕೋಣಗಳ ಮಾಲೀಕರಿಗೆ ಆಹ್ವಾನ ನೀಡುವ ಕಾರ್ಯವೂ ನಡೆದಿದೆ ಎಂದು ಅವರು ಹೇಳಿದರು.
ಕೋಣಗಳನ್ನು ಕರಾವಳಿಯಿಂದ ಮೈಸೂರಿಗೆ ಸುರಕ್ಷಿತವಾಗಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅ. 16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೋಣಗಳೊಂದಿಗೆ ಪ್ರಯಾಣ ಆರಂಭಿಸಿ, ಮಡಿಕೇರಿಯಲ್ಲಿ ವಿರಾಮ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಸಂಜೆ 4.30ರ ವೇಳೆಗೆ ಮೈಸೂರಿಗೆ ಪ್ರಯಾಣ ಮುಂದುವರಿಸಿ ರಾತ್ರಿ 9 ಗಂಟೆಯ ವೇಳೆಗೆ ತಲುಪುವಂತೆ ಯೋಜಿಸಲಾಗಿದೆ. ಮರುದಿನ ಅಂದರೆ ಅ. 17ರಂದು ಕೋಣಗಳಿಗೆ ಸಂಪೂರ್ಣ ವಿರಾಮ ದೊರೆಯಲಿದ್ದು, ಅ.18ರಂದು ಬೆಳಗ್ಗೆ ಕಂಬಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲಕರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲು ಈಗಾಗಲೆ ನಿರ್ಧರಿಸಲಾಗಿದೆ. ದೊಡ್ಡ ಜೋಡಿ ಕೋಣಗಳಿಗೆ 65 ಸಾವಿರ ರೂ. ಹಾಗೂ ಸಣ್ಣ ಜೋಡಿ ಕೋಣಗಳಿಗೆ 50 ಸಾವಿರ ರೂ. ನೀಡುವ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಮಾಲೀಕರ ಬೇಡಿಕೆಯ ಹಿನ್ನೆಲೆಯಲ್ಲಿ ಬಹುಮಾನ ಹಾಗೂ ಪದಕಗಳ ಮೊತ್ತವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಸಕ್ತ ಸೀನಿಯರ್ ವಿಭಾಗದಲ್ಲಿ ಪ್ರಥಮ 16 ಗ್ರಾಂ ದ್ವಿತೀಯ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತಿತ್ತು. ಇದೀಗ ಕಂಬಳ ಮಾಲಕರು ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ತಲಾ 8 ಗ್ರಾಂ ಚಿನ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪ್ರಥಮ 8 ಗ್ರಾಂ ನೀಡುತ್ತಿದ್ದು ಅದನ್ನು 16 ಗ್ರಾಂಗೆ ಹೆಚ್ಚಿಸಲು ದ್ವಿತೀಯ 5 ಗ್ರಾಂ ಚಿನ್ನವನ್ನೂ ಹೆಚ್ಚಳ ಮಾಡುವ ಜತೆಗೆ ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ಚಿನ್ನ ನೀಡಿ ಗೌರವಿಸುವಂತೆ ಕೋರಿದ್ದಾರೆ. ಈ ಬಗ್ಗೆ ಮೈಸೂರು ದಸರಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಅಶೋಕ್ ರೈ ತಿಳಿಸಿದರು.
ಭಾಗವಹಿಸುವ ಕೋಣಗಳ ಮಾಲೀಕರಿಗೆ ಮೈಸೂರು ದಸರಾ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ವಿಶೇಷ ಗೌರವ ನೀಡಲು ನಿರ್ಧರಿಸಲಾಗಿದೆ. ಮಾಲೀಕರಿಗೆ ಗುರುತಿನ ಚೀಟಿ ಹಾಗೂ ಪಾಸ್ಗಳನ್ನೂ ವಿತರಿಸಲಾಗುತ್ತದೆ.
ಕಂಬಳದಲ್ಲಿ ಭಾಗವಹಿಸುವ ಕೋಣಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸುಮಾರು 150ರಿಂದ 160 ಕೋಣಗಳನ್ನು ಆಯ್ಕೆ ಮಾಡುವ ಉದ್ದೇಶವಿದೆ. ಆಯ್ಕೆಯಾದ ಕೋಣಗಳ ಮಾಲೀಕರ ಮನೆಗಳಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಕೋಣಗಳಿಗೆ ವಾಸ್ತವ್ಯ, ಆಹಾರ, ತಂಗುವ ಸ್ಥಳ, ನೀರು, ಶೌಚಾಲಯ ಹಾಗೂ ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುತ್ತದೆ. ಕೋಣಗಳ ಸುರಕ್ಷತೆ ಮತ್ತು ಆರೈಕೆಗೆ ವಿಶೇಷ ಗಮನ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸುಮಾರು 48 ಗಂಟೆಗಳ ಕಂಬಳ ಇದಾಗಿದ್ದು, ಮೈಸೂರು ಅರಮನೆಯಿಂದ ಆರೇಳು ಕಿ.ಮೀ. ದೂರದ ವಿಶಾಲ ಪ್ರದೇಶದಲ್ಲಿ ಕಂಬಳ ಆಯೋಜನೆಯಾಗುತ್ತಿದೆ. ಯಾವುದೇ ಕಾರ್ಯಕ್ರಮ ಮಾಡುವಾಗ ಸಾಧಕ ಬಾಧಕಗಳಿರುತ್ತವೆ. ಸರಕಾರ ಎಲ್ಲವನ್ನೂ ಪರಿಶೀಲಿಸಿಕೊಂಡು ಕಂಬಳ ಆಯೋಜಿಸಿದೆ. ದಸರಾ ಪ್ರಯುಕ್ತ ಯುವ ದಸರಾ ನಡೆಯುತ್ತದೆ. ಈ ಬಾರಿ ಏರ್ ಶೋ, ಪಾಶ್ಚಿಮಾತ್ಯ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ. ಅದರ ಜತೆಗೆ ಕಂಬಳ ನಮ್ಮಕರಾವಳಿ ಸಂಸ್ಕೃತಿಯ ಪ್ರತಿಬಿಂಬವಾಗಿ ನಡೆಯಲಿದ್ದು, ರಾಜಮನೆತನಕ್ಕೂ ಈ ಕಂಬಳದ ನಂಟಿದೆ. ಕೋಣಗಳಿಗೆ ಮೈಸೂರಿನ ವಾತಾವರಣ ಪ್ರಸಕ್ತವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅಶೋಕ್ ರೈ ಪ್ರತಿಕ್ರಿಯಿಸಿದರು.
ಕಂಬಳದ ಜೊತೆಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಮೈಸೂರು ದಸರಾ ಪ್ರವಾಸಿಗರಿಗೆ ಪರಿಚಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸುಮಾರು ನಾಲ್ಕರಿಂದ ಐದು ಎಕರೆ ಪ್ರದೇಶದಲ್ಲಿ ಆಹಾರ ಮತ್ತು ವಿವಿಧ ವಸ್ತುಗಳ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದ್ದು ಪಾಸ್ ಇಲ್ಲದವರಿಗೂ ವೀಕ್ಷಿಸಲು ಅವಕಾಶವಿರುವ ಪ್ರತ್ಯೇಕ ವಲಯ ನಿರ್ಮಿಸಲಾಗುತ್ತಿದೆ. ಈ ವಲಯದಲ್ಲಿ ಸುಮಾರು 5 ಸಾವಿರ ಮಂದಿ ಕಂಬಳ ವೀಕ್ಷಿಸಲು ಅನುಕೂಲವಾಗಲಿದೆ. ಗಣ್ಯರು, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ವೀಕ್ಷಿಸಲು ಸುಮಾರು 25 ಲಕ್ಷ ಮಂದಿ ಆಗಮಿಸಬೇಕು ಎಂಬುದು ಆಯೋಜಕರ ಆಶಯವಾಗಿದೆ. ಕಂಬಳದ ಬಗ್ಗೆ ಮೈಸೂರಿನಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿದ್ದು ಸ್ಥಳೀಯರು ಹಾಗೂ ಪ್ರವಾಸಿಗರು ಕಂಬಳ ಯಾವಾಗ ನಡೆಯಲಿದೆ ಎಂದು ವಿಚಾರಿಸುತ್ತಿದ್ದಾರೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಕೋಣಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಕೋಣಗಳೊಂದಿಗೆ ಛಾಯಾಚಿತ್ರ ಹಾಗೂ ಸೆಲ್ಸಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶವೂ ಇದೆ. ಈ ಮೂಲಕ ಕರಾವಳಿಯ ಕಂಬಳ ಕ್ರೀಡೆ, ಸಂಸ್ಕೃತಿ ಮತ್ತು ಆಹಾರ ವೈವಿಧ್ಯವನ್ನು ಮೈಸೂರು ದಸರಾ ಮೂಲಕ ರಾಜ್ಯದ ಜನರಿಗೆ ಪರಿಚಯಿಸುವ ಪ್ರಯತ್ನ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಅವಕಾಶ ನೀಡಿದ್ದು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ವಿಶೇಷ ಸ್ಥಾನ ಮಾನ ದೊರಕಿದ್ದು ಇದೀಗ ತುಳುನಾಡು ಕರುನಾಡಿಗೆ ಸಂಬಂಧ ಕಲ್ಪಿಸುವ ಕೊಂಡಿಯಾಗಿ ಕಂಬಳ ನಡೆಯಲಿದೆ ಎಂದು ಕಂಬಳ ಅಸೋಸಿಯೇಶನ್ನ ರಾಜ್ಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









