ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಚರ್ಚಾಸ್ಪದ ಸ್ಟಿಂಗ್ ಆಪರೇಷನ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಅವರು ಸೋಮವಾರ ಸಿಸಿಬಿ ಸೈಬರ್ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಳೆದ ವಾರವಷ್ಟೇ ನ್ಯಾಯಾಲಯವು ಅವರಿಗೆ ಕೆಲವು ಷರತ್ತುಗಳೊಂದಿಗೆ ಮುಂಗಡ ಜಾಮೀನು ಮಂಜೂರು ಮಾಡಿತ್ತು. ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗಲೆಲ್ಲಾ ಕಡ್ಡಾಯವಾಗಿ ಹಾಜರಾಗಬೇಕು ಹಾಗೂ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು. ಈ ಪ್ರಕರಣದ ವೀಡಿಯೋದಲ್ಲಿ ಕೃಪಾ ಆಳ್ವ ಹಾಗೂ ಪವರ್ ಟಿವಿಯ ರಾಕೇಶ್ ಶೆಟ್ಟಿ ಕಾಣಿಸಿಕೊಂಡಿದ್ದರು.
ಪೊಲೀಸರು ನೀಡಿದ್ದ ನೊಟೀಸ್ಗೆ ಸ್ಪಂದಿಸಿದ ಕೃಪಾ ಆಳ್ವ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ವಿಭಾಗಕ್ಕೆ ಆಗಮಿಸಿದರು. ಸುಮಾರು ಎರಡುವರೆ ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರು, ನವೆಂಬರ್ 11ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಿದ್ದಾರೆ.
ವಿಚಾರಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪರ ವಕೀಲರಾದ ನಿಕಿತಾ, ಕೃಪಾ ಆಳ್ವ ಅವರು ಈಗಾಗಲೇ ಎರಡು ಬಾರಿ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ತಿಳಿಸಿದರು. ಪೊಲೀಸರು ಮತ್ತೊಮ್ಮೆ ಹಾಜರಾಗಲು ಸೂಚಿಸಿದ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಆಗಮಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೃಪಾ ಆಳ್ವ ಅವರ ಇತ್ತೀಚಿನ ವಿದೇಶ ಪ್ರವಾಸದ ಕುರಿತು ಎದ್ದಿದ್ದ ಪ್ರಶ್ನೆಗಳಿಗೆ ಉತ್ತರಿಸಿದ ವಕೀಲರು, ಅದು ತಮ್ಮ ಮಗಳೊಂದಿಗೆ ಮುಂಚಿತವಾಗಿಯೇ ಯೋಜಿಸಲಾಗಿದ್ದ ವೈಯಕ್ತಿಕ ಪ್ರವಾಸವಾಗಿತ್ತು. ಅದಕ್ಕೆ ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜಕೀಯ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









