ಬಂಟ್ವಾಳ : ಬಿಸಿರೋಡ್ ಮೇಲ್ಸೇತುವೆಯ ಮೇಲೆ ಸಂಚರಿಸುತ್ತಿದ್ದ ವೇಳೆ ಬುಲೆಟ್ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಫ್ಲೈಓವರ್ನಿಂದ ನೇರವಾಗಿ ಕೆಳಗಿನ ಸರ್ವೀಸ್ ರಸ್ತೆಗೆ ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡಿರುವ ರೋಚಕ ಘಟನೆ ಮಂಗಳವಾರ ಸಂಭವಿಸಿದೆ.
ಘಟನೆ ಸಂಭವಿಸಿದ ಸಂದರ್ಭದಲ್ಲಿ ಎರಡು ಬುಲೆಟ್ ಬೈಕ್ಗಳು ಒಟ್ಟಿಗೆ ಸಾಗುತ್ತಿದ್ದವು ಎನ್ನಲಾಗಿದ್ದು, ಈ ವಾಹನಗಳ ನಡುವೆ ಮುಖಾಮುಖಿ ಅಥವಾ ಪಕ್ಕಪಕ್ಕದ ಡಿಕ್ಕಿ ಸಂಭವಿಸಿ ಸವಾರ ಕೆಳಕ್ಕೆ ಬಿದ್ದಿದ್ದಾನೆಯೇ ಅಥವಾ ಅತಿವೇಗದಿಂದಾಗಿ ಸ್ವತಃ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಉರುಳಿದ್ದಾನೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೇಲ್ಸೇತುವೆಯ ಮೇಲಿನಿಂದ ನೇರವಾಗಿ ಸರ್ವೀಸ್ ರಸ್ತೆಗೆ ಬೈಕ್ ಸವಾರ ಅಪ್ಪಳಿಸಿದರೂ, ಅದೃಷ್ಟವಶಾತ್ ಆ ನಿರ್ದಿಷ್ಟ ಸಮಯದಲ್ಲಿ ಆ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ. ಇದರಿಂದಾಗಿ ದೊಡ್ಡ ಮಟ್ಟದ ಸರಣಿ ಅಪಘಾತ ಹಾಗೂ ಪ್ರಾಣಹಾನಿ ತಪ್ಪಿದಂತಾಗಿದೆ. ಸವಾರ ಕವರ್ ಮಾಡುವ ಹೆಲ್ಮೆಟ್ ಧರಿಸಿದ್ದರೂ ಕೂಡ ಬಿದ್ದ ರಭಸಕ್ಕೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಲ್ಲೇಖಾರ್ಹವೆಂದರೆ, ಇದೇ ಬಿಸಿರೋಡ್ ಫ್ಲೈಓವರ್ನಲ್ಲಿ ಕಳೆದ 2016ರಲ್ಲೂ ಇಂತಹಹುದೇ ಒಂದು ಭೀಕರ ಅಪಘಾತ ನಡೆದಿತ್ತು. ರಾತ್ರಿ ವೇಳೆ ವೇಗವಾಗಿ ಬಂದ ಬೈಕ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಕರಾಳ ಇತಿಹಾಸ ಇಲ್ಲಿ ಮರುಕಳಿಸಿದಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









