ಮಂಗಳೂರು : ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಬಲ್ಲಾಳ್ ಅವರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ನೀಡಲಾಗುತ್ತಿರುವ ಅಲ್ಪ ಗೌರವಧನದ ಬದಲಾಗಿ ಕನಿಷ್ಠ ವೇತನ ಜಾರಿಗೆ ತರಬೇಕು ಹಾಗೂ 2011 ರಿಂದ ನಿವೃತ್ತರಾದ ಎಲ್ಲಾ ಸಿಬ್ಬಂದಿಗೆ ಇಎಸ್ಐ ಮತ್ತು ಗ್ರಾಚ್ಯುಟಿ ಸೌಲಭ್ಯಗಳನ್ನು ತಕ್ಷಣವೇ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು. ಅರ್ಧ ಶತಮಾನದಿಂದ ಸೇವೆ ಸಲ್ಲಿಸುತ್ತಿದ್ದರೂ ಕಾರ್ಯಕರ್ತೆಯರಿಗೆ ₹12,000 ಹಾಗೂ ಸಹಾಯಕಿಯರಿಗೆ ₹6,000 ಮಾತ್ರ ತಲುಪುತ್ತಿದ್ದು, ಶಾಲಾಪೂರ್ವ ಶಿಕ್ಷಣ, ಲಸಿಕಾ ಅಭಿಯಾನ, ಪೌಷ್ಟಿಕ ಆಹಾರ ವಿತರಣೆಯಂತಹ ಮೂಲ ಜವಾಬ್ದಾರಿಗಳ ಜೊತೆಗೆ ಬಿಎಲ್ಒ ಮತ್ತು ಜನಗಣತಿಯಂತಹ ಇಲಾಖೇತರ ಕೆಲಸಗಳ ಭಾರವನ್ನು ಹೊರಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಂಘದ ಪ್ರಮುಖ ಬೇಡಿಕೆಗಳನ್ನು ಮಂಡಿಸಿದ ಅವರು, ಪ್ರತಿ ತಿಂಗಳ ೫ರೊಳಗೆ ವೇತನ ಪಾವತಿಯಾಗಬೇಕು ಹಾಗೂ ಕಾರ್ಯಕರ್ತೆಯರಿಗೆ ₹15,000 ಮತ್ತು ಸಹಾಯಕಿಯರಿಗೆ ₹10,000 ಮಧ್ಯಂತರ ಗೌರವಧನ ನಿಗದಿಪಡಿಸಬೇಕು ಎಂದು ಹೇಳಿದರು. ಇದರೊಂದಿಗೆ ಮೊಟ್ಟೆ ಖರೀದಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡುವುದು, ಸುಧಾರಿತ ೫ಜಿ ಮೊಬೈಲ್, ಗುಣಮಟ್ಟದ ಸಮವಸ್ತ್ರ ಮತ್ತು ಕೇಂದ್ರಗಳ ನಿರ್ವಹಣೆಗೆ ಸೂಕ್ತ ಸಾದಿಲ್ವಾರು ಅನುದಾನ ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದರು. ಸರ್ಕಾರಿ ಕಾರ್ಯಕ್ರಮಗಳಿಗೆ ಜನರನ್ನು ಕರೆತರುವ ಕೆಲಸಕ್ಕೆ ಸಿಬ್ಬಂದಿಯನ್ನು ಬಳಸುವುದನ್ನು ತಕ್ಷಣವೇ ಕೈಬಿಡಬೇಕು ಮತ್ತು ಸಭೆಯ ಊಟದ ಭತ್ಯೆಯನ್ನು ₹೩೦ರಿಂದ ₹೨೫೦ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಆಶಾಲತಾ, ರೇಣುಕಾ, ವಿಶಾಲಾಕ್ಷಿ, ಗುಲಾಬಿ, ಶೀಲಾವತಿ ಹಾಗೂ ವಿಜಯವಾಣಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









