ಮಂಗಳೂರು : ಮಂಗಳೂರಿನ ಕರಂಗಲ್ಪಾಡಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪ್ರಥಮ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವಿನಯ್ ಅವರು ಚಲಾಯಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾವೊಂದು ಮುಖಾಮುಖಿ ಡಿಕ್ಕಿಯಾಗಿದೆ. ಈ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೋರ್ಟ್ ರಸ್ತೆಯಿಂದ ಇಳಿದು ಬರುತ್ತಿದ್ದ ಗೂಡ್ಸ್ ಆಟೋ, ಕರಂಗಲ್ಪಾಡಿ ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಯತ್ತ ತಿರುವು ಪಡೆದುಕೊಳ್ಳುತ್ತಿದ್ದ ನ್ಯಾಯಾಧೀಶರ ಕಾರಿಗೆ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ರಸ್ತೆಯಲ್ಲೇ ಪಲ್ಟಿಯಾಗಿದ್ದು, ಅದರಲ್ಲಿದ್ದ ಚಾಲಕ ಕಾಸರಗೋಡು ಮೊಗ್ರಾಲ್ ನಿವಾಸಿ ಹಾಗೂ ನಗರದ ಕಲ್ಪನಾ ಸ್ವೀಟ್ಸ್ ಆಟೋ ಚಾಲಕರಾಗಿದ್ದ ಚಂದ್ರ ಕೆ. (69) ಅವರು ಗಂಭೀರ ಗಾಯಗೊಂಡು ಮಧ್ಯಾಹ್ನ 12 ಗಂಟೆಯ ವೇಳೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸ್ವತಃ ಕಾರು ಚಾಲನೆ ಮಾಡುತ್ತಿದ್ದ ನ್ಯಾಯಾಧೀಶ ವಿನಯ್ ಅವರ ಕೈಗೆ ಗಾಯಗಳಾಗಿದ್ದು, ಆಟೋ ಪಲ್ಟಿಯಾದಾಗ ಪಕ್ಕದಲ್ಲಿದ್ದ ಸ್ಕೂಟರ್ಗೆ ತಾಗಿದ್ದರಿಂದ ಅದರ ಸವಾರ ಪ್ಲೇವಿಯರ್ (51) ಅವರಿಗೂ ಗಾಯಗಳಾಗಿವೆ.
ಘಟನೆ ಕುರಿತು ನ್ಯಾಯಾಧೀಶರ ದೂರಿನನ್ವಯ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಟೋ ಯಾವುದೇ ಬ್ರೇಕ್ ಹಾಕದೆ ನೇರವಾಗಿ ಕಾರಿಗೆ ಡಿಕ್ಕಿಯಾಗಿರುವುದು ಕಂಡುಬಂದಿದೆ. ಚಾಲಕನಿಗೆ ಕಣ್ಣು ಮಂಜಾದದ್ದು ಅಥವಾ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡದ್ದು ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









