
ಮಂಗಳೂರು : ಇತ್ತೀಚಿನ ದಿನಗಳಲ್ಲಿ ನಾನಾ ನಮೂನೆಯ ಕಾಯಿಲೆಗಳು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ವ್ಯಾಪಕವಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ರಕ್ತದ ಅಭಾವ ಹೆಚ್ಚಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ ತಿಳಿಸಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ-2026, ರಕ್ತದಾನ ಶಿಬಿರ ಹಾಗೂ ಸಾಧಕ ದಾನಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಚಿಕಿತ್ಸೆ ವೇಳೆ ರಕ್ತದ ಅಗತ್ಯತೆ ದಿನೇ ದಿನೇ ಏರಿಕೆಯಾಗುತ್ತಿದ್ದು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುವ ಮೂಲಕ ರೋಗಿಗಳಿಗೆ ನೆರವಾಗಬೇಕು. ರಕ್ತದಾನ ಮಾಡುವುದರಿಂದ ದಾನಿಗಳ ಆರೋಗ್ಯವೂ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಮಾತನಾಡಿ, ವೈದ್ಯರಷ್ಟೇ ಪ್ರಮುಖವಾಗಿ ರಕ್ತದಾನಿಗಳು ಕೂಡ ಜೀವ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ರಕ್ತ ಸಂಗ್ರಹಣೆಯ ಮುನ್ನ ದಾನಿಗಳ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸುವುದರಿಂದ, ಅವರಿಗೆ ತಿಳಿಯದೇ ಇರುವ ಆರೋಗ್ಯ ಸಮಸ್ಯೆಗಳು ಆರಂಭಿಕ ಹಂತದಲ್ಲೇ ಪತ್ತೆಯಾಗಿ ಸೂಕ್ತ ಚಿಕಿತ್ಸೆ ಪಡೆಯಲು ನೆರವಾಗುತ್ತದೆ ಎಂದು ವಿವರಿಸಿದರು. ರಕ್ತಪೂರಣ ಘಟಕದ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ಮಾತನಾಡಿ, ನಿಯಮಿತ ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತದ ಕಣಗಳು ಉತ್ಪತ್ತಿಯಾಗುವುದಲ್ಲದೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ ದೇಹವು ಆರೋಗ್ಯಕರವಾಗಿರುತ್ತದೆ ಎಂದು ತಿಳಿಸಿದರು.
ಇದೇ ಸುಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಜೀವ ರಕ್ಷಕರಾಗಿ ಹೊರಹೊಮ್ಮಿದ ಕೃತಿನ್ ಕುಮಾರ್ (101 ಬಾರಿ) ಹಾಗೂ ಫಿರೋಜ್ (100 ಬಾರಿ) ಸೇರಿದಂತೆ ವಿಶ್ವನಾಥ್ ಕಾಮತ್ (90 ಬಾರಿ), ದೀಪಕ್ ನಾಯಕ್ (72 ಬಾರಿ), ಗಣೇಶ್ ಪ್ರಸಾದ್ (64 ಬಾರಿ) ಮತ್ತು ಸತೀಶ್ (51 ಬಾರಿ) ಅವರನ್ನು ಶಾಲು ಹೊದಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಜಾಗೃತಿ ಕಾರ್ಯಕ್ರಮದ ಭಾಗವಾಗಿ ನಡೆದ ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಪ್ರೇರಣೆಯಾದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಅತಿಥಿಗಳನ್ನು ಸ್ವಾಗತಿಸಿದರು. ಐಸಿಟಿಸಿ ಕೌನ್ಸಿಲರ್ ಪ್ರಮೀಳಾ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಖತೀಜ ದಿಲ್ ಶಾದ್ ವಂದನಾರ್ಪಣೆ ಮಾಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









