ಮಂಗಳೂರು : ದೇಶಾದ್ಯಂತ ಕ್ಷಯರೋಗವನ್ನು (ಟಿಬಿ) ಸಂಪೂರ್ಣವಾಗಿ ಉಚ್ಚಾಟನೆ ಮಾಡುವ ಬೃಹತ್ ಉದ್ದೇಶದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು ‘ಜೋಶ್’ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಈ ರಾಷ್ಟ್ರೀಯ ಅಭಿಯಾನಕ್ಕೆ, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟದ ಉದ್ಘಾಟನೆಯನ್ನು ಮಂಗಳೂರಿನ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗಿಡಕ್ಕೆ ನೀರೆರೆಯುವ ಮೂಲಕ ಅಧಿಕೃತವಾಗಿ ನೆರವೇರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಟಿಬಿ ಮುಕ್ತ ಭಾರತ’ ಕನಸು ನನಸಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಪ್ರತಿಪಾದಿಸಿದರು. ಗ್ರಾಮ ಪಂಚಾಯತ್ ಮಟ್ಟದಿಂದಲೇ ಜಾಗೃತಿ ಮೂಡಿಸಿ ‘ಟಿಬಿ ಮುಕ್ತ ಪಂಚಾಯತ್’ಗಳನ್ನು ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ‘ಜೋಶ್’ ಯೋಜನೆಯು ತಳಮಟ್ಟದಲ್ಲಿ ಜನರಲ್ಲಿ ಅರಿವು ಮೂಡಿಸಲು ಅತ್ಯಂತ ಪರಿಣಾಮಕಾರಿ ವೇದಿಕೆಯಾಗಲಿದೆ ಎಂದು ಅವರು ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳ ಜಂಟಿ ಸಹಯೋಗದೊಂದಿಗೆ ಈ ‘ಜೋಶ್’ (JOSH – Joint Squad for Health) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಯುವಶಕ್ತಿಯನ್ನು ಈ ಅಭಿಯಾನದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಲಾಗುತ್ತಿದ್ದು, ಪ್ರತಿಯೊಂದು ತಂಡದಲ್ಲಿ ಬ್ಲಾಕ್ ಮಟ್ಟದ ಪ್ರಥಮ ದರ್ಜೆ ಅಧಿಕಾರಿಗಳು, ‘ಮೈ ಭಾರತ್’ (MY Bharat) ಸ್ವಯಂಸೇವಕರು ಮತ್ತು ಎನ್ಸಿಸಿ (NCC) ಕೆಡೆಟ್ಗಳು ಇರಲಿದ್ದಾರೆ. ಈ ತಂಡಗಳು ಗ್ರಾಮ ಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಿವೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಖತೀಜಾ ಸೇರಿದಂತೆ ಆರೋಗ್ಯ ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









