ಮಂಗಳೂರು : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮಣೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡ ಭೀಕರ ಮಣ್ಣು ಕುಸಿತ ದುರಂತ ಸಂಭವಿಸಿ ಒಂದೂವರೆ ವರ್ಷ ಗತಿಸಿದರೂ, ಈವರೆಗೂ ಯಾವುದೇ ಎಫ್ಐಆರ್ ದಾಖಲಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ನಿರ್ಮಾಣದ ವೇಳೆ ವಹಿಸಿದ ನಿರ್ಲಕ್ಷ್ಯವೇ ದುರಂತಕ್ಕೆ ಪ್ರಮುಖ ಕಾರಣಗಳಲ್ಲೊಂದು ಎಂದು ಎನ್ಐಟಿಕೆ ತಜ್ಞರ ತಂಡವು ಸ್ಪಷ್ಟ ವರದಿ ನೀಡಿದ್ದರೂ ಸಹ, ಕೊಣಾಜೆ ಪೊಲೀಸರು ಸಂಬಂಧಪಟ್ಟ ಎಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಿಂಜರಿಯುತ್ತಿದ್ದಾರೆ. ಇತ್ತ ಜಿಲ್ಲಾಡಳಿತ ಕೂಡ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ನಿರ್ಧಾರ ತಳೆಯಲಾಗದೆ ಗೊಂದಲದಲ್ಲಿದೆ.
ದುರಂತದ ಆರಂಭದಲ್ಲಿ ನಡೆಸಲಾದ ತನಿಖೆ ಅಪೂರ್ಣಗೊಂಡಿದ್ದರಿಂದ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎನ್ಐಟಿಕೆ ತಜ್ಞರ ತಂಡವು 2026ರ ಜನವರಿ 13ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸಾಯಿಲ್ ಎಕ್ಸ್ಪೋಷರ್, ಇಳಿಜಾರಿನ ಸ್ವರೂಪ, ಸ್ಥಳೀಯರ ಹೇಳಿಕೆಗಳು ಹಾಗೂ ಅವಶೇಷಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ ತಜ್ಞರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯ ಪ್ರತಿಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದ್ದರೂ, ರಸ್ತೆ ಕಾಮಗಾರಿ ನಿರ್ವಹಿಸಿದ ಎಂಜಿನಿಯರ್ಗಳ ಮೇಲೆ ಇನ್ನು ಪ್ರಕರಣ ದಾಖಲಿಸದಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.
ಲ್ಯಾಟೈಟ್ ಮಣ್ಣಿನಿಂದ ಕೂಡಿದ ಈ ಕಡಿದಾದ ಇಳಿಜಾರು ಪ್ರದೇಶದಲ್ಲಿ ನಿರಂತರ ಮತ್ತು ಭಾರೀ ಮಳೆಯಾಗಿದ್ದು, ರಸ್ತೆ ಹಾಗೂ ಮನೆ ನಿರ್ಮಾಣಕ್ಕಾಗಿ ತಳಭಾಗದಲ್ಲಿ ಅಸಮರ್ಪಕವಾಗಿ ಮಣ್ಣು ಅಗೆದಿರುವುದೇ ಕುಸಿತಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಮೇಲ್ಮೈ ಹಾಗೂ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಮಣ್ಣಿನಲ್ಲಿ ನೀರು ಅತಿಯಾಗಿ ತುಂಬಿ (ಸ್ಯಾಚುರೇಷನ್) ಮೃದುವಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿ ಬೆಟ್ಟುಮಾಡಿದೆ. ಇನ್ನೊಂದೆಡೆ, ನಿರಾಶ್ರಿತ ಸಂತ್ರಸ್ತ ಕುಟುಂಬಕ್ಕೆ ಪರ್ಯಾಯ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಪ್ರಕ್ರಿಯೆ ಆರಂಭಿಸಿದೆಯಾದರೂ, ಅದು ಕೈಸೇರಿದ ಮೇಲಷ್ಟೇ ನಂಬಲು ಸಾಧ್ಯ ಎಂಬ ಅಭಿಪ್ರಾಯ ಸಂತ್ರಸ್ತರಿಂದ ವ್ಯಕ್ತವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









