ಮಂಗಳೂರು : ಕೊಣಾಜೆ ಸಮೀಪದ ಬೋಳಿಯಾರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ಈ ದುರ್ಘಟನೆ ಜರುಗಿದೆ.
ಕಿನ್ಯಾ ಅರೆಬಿನಗರದ ಮಹಮ್ಮದ್ ಅರ್ಫಾಝ್ (22) ಹಾಗೂ ಕಿನ್ಯಾ ಉಕ್ಕುಡ ನಿವಾಸಿ ಜುನೈದ್ (23) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಪಿಕಪ್ ವಾಹನವು ಅವರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರಾದ ಇಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತರ ಪೈಕಿ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅರ್ಫಾಝ್ ಮುಂಬೈಯಲ್ಲಿದ್ದು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು ಎಂಬುದು ತಿಳಿದುಬಂದಿದೆ.
ಅಪಘಾತ ಎಸಗಿದ ಬಳಿಕ ವಾಹನ ನಿಲ್ಲಿಸದ ಪಿಕಪ್ ಚಾಲಕ, ತಕ್ಷಣವೇ ಡೋರ್ ತೆಗೆದು ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಪೂರ್ಣ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಕೊಣಾಜೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









