ಉಪ್ಪಿನಂಗಡಿ: ಉಪ್ಪಿನಂಗಡಿ ಪಟ್ಟಣದ ಶೆಣೈ ಆಸ್ಪತ್ರೆ ರಸ್ತೆಯಲ್ಲಿರುವ ಕಾರ್ತಿಕ್ ಬಾರ್ ಸಮೀಪ ಅಕ್ಟೋಬರ್ 18ರ ರಾತ್ರಿ ಹೈಡ್ರಾಮಾ ನಡೆದಿದ್ದು, ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ತಂಡವೊಂದು ಪರಸ್ಪರ ಗಲಾಟೆ ಮಾಡಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮೂಲತಃ ಪುತ್ತೂರು ಚಿಕ್ಕಮುನ್ನೂರು ನಿವಾಸಿ ಮಂಜುನಾಥ (32) ಹಾಗೂ ನೆಕ್ಕಿಲಾಡಿ ನಿವಾಸಿ ವಿಶ್ವನಾಥ (30) ಬಂಧಿತರಾದ ಆರೋಪಿಗಳಾಗಿದ್ದಾರೆ. ಇವರೊಂದಿಗೆ ಗಲಾಟೆಯಲ್ಲಿ ಭಾಗಿಯಾಗಿದ್ದ ಮುನ್ನ ಯಾನೆ ಗೋಪಾಲ ಶೆಟ್ಟಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಆರ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮದ್ಯದ ಅಮಲಿನಲ್ಲಿ ಮುನ್ನ ಎಂಬಾತ ಮಂಜುನಾಥನ ಮನೆಯವರ ಬಗ್ಗೆ ಹೀಯಾಳಿಸಿ ನಿಂದಿಸಿದ್ದಾನೆ. ಇದರಿಂದ ಕೆರಳಿದ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ವಾಗ್ವಾದ ವಿಕೋಪಕ್ಕೆ ತಿರುಗಿದೆ. ಬಾರ್ನಿಂದ ಹೊರಬಂದ ಮಂಜುನಾಥ ತಲವಾರು ಬೀಸಿ ಹಲ್ಲೆಗೆ ಯತ್ನಿಸಿದರೆ, ಪ್ರತಿಯಾಗಿ ಮುನ್ನ ಬಿಯರ್ ಬಾಟಲಿ ಹಿಡಿದು ಬೆದರಿಕೆ ಹಾಕಿದ್ದಾನೆ.
ಘಟನಾ ಸ್ಥಳದಲ್ಲಿ ಸಾರ್ವಜನಿಕರಿಗೆ ಆತಂಕದ ವಾತಾವರಣ ಸೃಷ್ಟಿಯಾಗಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಎಚ್ಚೆತ್ತ ಉಪ್ಪಿನಂಗಡಿ ಠಾಣಾ ಪೊಲೀಸರು ಕ್ಷಿಪ್ರವಾಗಿ ಧಾವಿಸಿದ್ದಾರೆ. ಈ ವೇಳೆ ಸಾಹಸಪ್ರದವಾಗಿ ಮಂಜುನಾಥನ ಹಿಂದಿನಿಂದ ಬಂದ ಪೊಲೀಸರೊಬ್ಬರು ಆತನ ಎರಡೂ ಕೈಗಳನ್ನು ಬಿಗಿದು ಲಾಕ್ ಮಾಡಿ, ಬಳಿಕ ಕೈಯಲ್ಲಿದ್ದ ತಲವಾರನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಎಂಟ್ರಿಯಾಗುತ್ತಿದ್ದಂತೆ ಎಚ್ಚೆತ್ತ ಮುನ್ನ ಸ್ಥಳದಿಂದ ನಾಪತ್ತೆಯಾಗಿದ್ದಾನೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 135/2026, ಬಿಎನ್ಎಸ್-2023ರ ಕಲಂ 194, 296, 351(3) ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 25(1ಬಿ), (ಬಿ) ಅಡಿಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿ ಮಂಜುನಾಥನ ಹಿನ್ನೆಲೆ ಪರಿಶೀಲಿಸಿದಾಗ, ಆತನ ಮೇಲೆ ಈಗಾಗಲೇ ಉಪ್ಪಿನಂಗಡಿ ಠಾಣೆಯಲ್ಲಿ ಹಲ್ಲೆ ಹಾಗೂ ಧರ್ಮಸ್ಥಳ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









