ಮಂಗಳೂರು : ಒಂಬತ್ತು ದಿನಗಳ ಕಾಲ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ, ಭಕ್ತ ಸಮೂಹವನ್ನು ಮಂತ್ರಮುಗ್ಧಗೊಳಿಸಿದ್ದ ನವರಾತ್ರಿ ಉತ್ಸವವು ವಿಜಯದಶಮಿಯ ದಿನದಂದು ಅದ್ಧೂರಿ ಶೋಭಾಯಾತ್ರೆಯೊಂದಿಗೆ ಕಳೆಗಟ್ಟಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಸಂಜೆ ಆರಂಭವಾದ ದಸರಾ ಮೆರವಣಿಗೆಯು ಗುರುವಾರ ಮುಂಜಾನೆಯವರೆಗೆ ವಿಜೃಂಭಣೆಯಿಂದ ಜರುಗಿತು. ಈ ಐತಿಹಾಸಿಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು.
ಕ್ಷೇತ್ರದ ಅಭಿವೃದ್ಧಿಯ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮೆರವಣಿಗೆಯು ಮಂಗಳೂರು ದಸರಾದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು. ನವರಾತ್ರಿಯ ಇಡೀ ಅವಧಿಯಲ್ಲಿ ವಿಶೇಷ ಪೂಜೆಗೊಳಗಾದ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ದೇವಿ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿಗಳನ್ನು ಭಕ್ತಿಪೂರ್ವಕವಾಗಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ವಿವಿಧ ಕಲಾಕೃತಿಗಳು ಹಾಗೂ ಸಂಸ್ಕೃತಿಯ ಬಿಂಬಿಸುವ ಆಕರ್ಷಕ ಸ್ತಬ್ಧಚಿತ್ರಗಳು ಮೆರವಣಿಗೆಯ ಮೆರುಗನ್ನು ಇಮ್ಮಡಿಗೊಳಿಸಿದವು. ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಜಗಮಗಿಸುತ್ತಿದ್ದ ರಸ್ತೆಗಳಲ್ಲಿ ಸಾಗಿದ ಈ ಉತ್ಸವವನ್ನು ನೋಡುಗರ ಕಣ್ಣಿಗೆ ಹಬ್ಬದಂತೆ ಮೂಡಿಬಂತು.
ಕುದ್ರೋಳಿ ಕ್ಷೇತ್ರದಿಂದ ಹೊರಟ ಶೋಭಾಯಾತ್ರೆ ಮಣ್ಣಗುಡ್ಡ, ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲಾಲ್ಬಾಗ್, ಬಲ್ಲಾಳ್ಬಾಗ್, ಪಿ.ವಿ.ಎಸ್. ಜಂಕ್ಷನ್, ಕೆ. ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ. ವಿ. ಕಾಲೇಜು ವೃತ್ತ, ಗಣಪತಿ ಹೈಸ್ಕೂಲ್, ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಸ್ಟ್ರೀಟ್ ಮತ್ತು ಅಳಕೆ ಮಾರ್ಗವಾಗಿ ಸಾಗಿ ಮರಳಿ ಕುದ್ರೋಳಿಯನ್ನು ತಲುಪಿತು. ನಗರದ ಸುಮಾರು ಒಂಬತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಮೆರವಣಿಗೆ ಸಾಗಿತು.
ಮೆರವಣಿಗೆ ಆರಂಭವಾಗುವ ಮುನ್ನ ಶ್ರೀ ಶಾರದಾ ಮಾತೆಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದ ವಿವಿಧ ಗಣ್ಯರನ್ನು ಹಾಗೂ ಕಾರ್ಯಕರ್ತರನ್ನು ಬಿ. ಜನಾರ್ದನ ಪೂಜಾರಿ ಅವರು ಸನ್ಮಾನಿಸಿ ಗೌರವಿಸಿದರು. ಉತ್ಸವದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರ ಸೇವೆಯನ್ನು ಈ ವೇಳೆ ಸ್ಮರಿಸಲಾಯಿತು.
ಈ ಧಾರ್ಮಿಕ ಮಹೋತ್ಸವದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಎಚ್. ಎಸ್. ಸಾಯಿರಾಂ, ಸಂತೋಷ್ ಕುಮಾರ್ ಜೆ., ಜಗದೀಪ್ ಡಿ. ಸುವರ್ಣ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ| ಅನಸೂಯಾ ಬಿ. ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ| ಬಿ. ಜಿ. ಸುವರ್ಣ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









