ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ 36 ವರ್ಷಗಳಿಂದ ಛಾಯಾಗ್ರಾಹಕರ ಶ್ರೇಯೋಭಿವೃದ್ಧಿ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ಸಂಸ್ಥೆಗೆ ಸರ್ಕಾರಿ ನಿವೇಶನ ಮಂಜೂರು ಮಾಡುವಂತೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾರವರಿಗೆ ಮನವಿ ಸಲ್ಲಿಸಲಾಗಿದೆ.
ಸುಮಾರು 4,500ಕ್ಕೂ ಅಧಿಕ ಸದಸ್ಯ ಬಲವನ್ನು ಹೊಂದಿರುವ ಈ ಸಂಸ್ಥೆಯು ಛಾಯಾಗ್ರಾಹಕರಿಗೆ ವೃತ್ತಿಪರ ಕೌಶಲ ತರಬೇತಿ, ಕಷ್ಟದಲ್ಲಿರುವ ಸದಸ್ಯರಿಗೆ ಆರ್ಥಿಕ ನೆರವು, ಶೈಕ್ಷಣಿಕ ಹಾಗೂ ವೈದ್ಯಕೀಯ ಸಹಾಯ, ರಕ್ತದಾನ ಶಿಬಿರ ಮತ್ತು ಕೊರೊನಾ ಸಂಕಷ್ಟದ ಸಮಯದಲ್ಲೂ ನಿರಂತರವಾಗಿ ಸಾಮಾಜಿಕ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಆದರೆ, ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಸಭೆ-ಸಮಾರಂಭಗಳು ಹಾಗೂ ತರಬೇತಿ ಶಿಬಿರಗಳನ್ನು ನಡೆಸಲು ತೊಂದರೆಯಾಗುತ್ತಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡಬೇಕೆಂದು ಕೋರಲಾಗಿದೆ.
ಸಂಸ್ಥೆಯ ಈ ಬಹುದಿನಗಳ ಬೇಡಿಕೆ ಮತ್ತು ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ, ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ರವರಿಗೆ ಜಮೀನಿನ ಲಭ್ಯತೆ ಮತ್ತು ಕಾನೂನಾತ್ಮಕ ಅರ್ಹತೆ ಪರಿಶೀಲಿಸಿ ನಿವೇಶನ ಮಂಜೂರು ಮಾಡುವಂತೆ ಶಾಸಕ ಐವನ್ ಡಿʼಸೋಜಾ ಅವರು ತಕ್ಷಣವೇ ಶಿಫಾರಸು ಪತ್ರ ರವಾನಿಸಿದ್ದಾರೆ.
ಮನವಿ ಸಲ್ಲಿಸುವ ಈ ಸಂದರ್ಭದಲ್ಲಿ ಎಸ್ಕೆಪಿಎ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ, ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಮಾಜಿ ಸಂಚಾಲಕ ವಿಠಲ್ ಚೌಟ, ಮಾಜಿ ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾಳ್ ಹಾಗೂ ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸಾ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









