ಮಂಗಳೂರು : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಹಮ್ಮಿಕೊಂಡಿದ್ದ ‘ನಮ್ಮ ಹಕ್ಕು ನಮಗೆ ನೀಡಿ’ ಎಂಬ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಮಾವೇಶದಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಡವರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಯಾವುದೇ ಸಾಮರ್ಥ್ಯ ಇಲ್ಲದ ಈ ಸರ್ಕಾರವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಗುಡುಗಿದರು.
ಚುನಾವಣೆ ವೇಳೆಯಲ್ಲಿ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಮಹಿಳೆಯರಿಗೆ ನೀಡಬೇಕಾದ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಸರಿಯಾಗಿ ತಲುಪಿಸುತ್ತಿಲ್ಲ. ಹೆಣ್ಣುಮಕ್ಕಳ ಖಾತೆಗೆ ಜಮೆಯಾಗಬೇಕಿದ್ದ ಈ ಹಣ ಎಲ್ಲಿಗೆ ಹೋಯಿತು? ಯಾರ ಜೇಬು ಸೇರುತ್ತಿದೆ? ಎಂಬುದನ್ನು ಸರ್ಕಾರ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಶಾಸಕರು ಸವಾಲೆಸೆದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸಾಲು ಸಾಲು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ಸಂಪೂರ್ಣ ದುಸ್ತರವಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಸರ್ಕಾರ, ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಹೀಗಾಗಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವವರೆಗೆ ಬಿಜೆಪಿ ಸರ್ಕಾರದ ವಿರುದ್ಧ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಅವರು ತಿಳಿಸಿದರು.
ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ವಿಕಾಸ್ ಕುಮಾರ್ ಪುತ್ತೂರು, ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಅಡ್ಯಾರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕಮಲಾಕ್ಷ ತಲ್ಲಿಮಾರ್, ಉಳಾಯಿಬೆಟ್ಟು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ ಹಾಗೂ ರಣದೀಪ್ ಕಾಂಚನ್, ಜಿಲ್ಲಾ ಸಹಸಂಚಾಲಕ ಲೋಹಿತ್ ಅಮಿನ್, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಾ ಕರಿಯ, ಹಿರಿಯ ನಾಗರಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಾಮ ಅಮೀನ್, ಎಸ್ಸಿ ಮೋರ್ಚಾ ಪ್ರಮುಖ ಉಮೇಶ್ ಕೋಟ್ಯಾನ್, ಮಾಜಿ ಮೇಯರ್, ಪಂಚಾಯತ್ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









