ಮಂಗಳೂರು : ದೇಶದಲ್ಲೇ ವಿಶಿಷ್ಟ ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ಮುನ್ನಡೆಯುತ್ತಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು, ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜೀವ ವೈವಿಧ್ಯತೆ, ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಭಾಗವಾಗಿ ಮತ್ಸ್ಯ ತಳಿಗಳ ಸಂರಕ್ಷಣೆ, ಸಂತಾನೋತ್ಪತ್ತಿ ಮತ್ತು ಸಹಜ ಆವಾಸಸ್ಥಾನಗಳಿಗೆ ಮರುಪೂರಣಗೊಳಿಸುವ ಕಾಯಕದೊಂದಿಗೆ, ಪಿಲಿಕುಳ ಕೆರೆಯಲ್ಲಿ ಬೆಳೆಸಿದ ಬೃಹತ್ ಮೀನುಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಒದಗಿಸುವ ವಾರ್ಷಿಕ ಉಪಕ್ರಮವನ್ನು ಸಾಕಾರಗೊಳಿಸಲಾಗುತ್ತಿದೆ.
ಅದರಂತೆ, ರವಿವಾರದಂದು ಪಿಲಿಕುಳದ ಬೃಹತ್ ಕೆರೆಯಲ್ಲಿ ಸುಪೋಷಿತಗೊಂಡ ಕಾಟ್ಲಾ, ರೋಹು, ಗೌರಿ ಹಾಗೂ ತಿಲೇಪಿಯಾ ಮುಂತಾದ ವಿವಿಧ ತಳಿಯ ಮೀನುಗಳನ್ನು ಹಿಡಿದು ಮಾರಾಟ ಮಾಡುವ ‘ಮತ್ಸ್ಯೋತ್ಸವ’ ಹಾಗೂ ವೈವಿಧ್ಯಮಯ ‘ಮೀನು ಆಹಾರ ಮೇಳ’ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೆರೆಗೆ ಮತ್ಸ್ಯಗಳನ್ನು ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ, ಎನ್.ಜಿ.ಮೋಹನ್, ಉಪಸಮಿತಿ ಅಧ್ಯಕ್ಷ ಜಿ. ಶ್ರೀನಿಕೇತನ್ ಮತ್ತು ಕೆಎಫ್ಡಿಸಿ ಜನರಲ್ ಮ್ಯಾನೇಜರ್ ಮಹೇಶ್ ಕುಮಾರ್ ಅತಿಥಿಗಳಾಗಿ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಅರುಣ್ ಕುಮಾರ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್. ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಜಗನ್ನಾಥ್ ಅವರು ಕಾರ್ಯಕ್ರಮ ನಿರೂಪಿಸಿ, ರಾಮಕೃಷ್ಣ ಮರಾಟಿ ವಂದನೆ ಸಲ್ಲಿಸಿದರು. ಡಾ. ನಿತಿನ್, ಉದಯ ಕುಮಾರ್ ಶೆಟ್ಟಿ ಮತ್ತು ನಾಗೇಶ್ ಕುಲಾಲ್ ಕಾರ್ಯಕ್ರಮದ ನಿರ್ವಹಣೆಗೆ ಶ್ರಮಿಸಿದರು. ಸುಮಾರು 2000 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಈ ಮೇಳದಲ್ಲಿ ಜನರು ವಿವಿಧ ಬಗೆಯ ರುಚಿಕರ ಮೀನಿನ ಖಾದ್ಯಗಳನ್ನು ಸವಿದು ಮಜಾ ಮಾಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









