ಮಂಗಳೂರು : ಮಾಯಾ ಅನ್ನಾಮರಿ ರೇಗೊ ಎಂಬವರ ಕುಟುಂಬವನ್ನು ಗುರಿಯಾಗಿಸಿಕೊಂಡು, ಅವರ ಮೇಲೆ ಆಧಾರರಹಿತ ಕೊಲೆ ಪ್ರಕರಣಗಳ ಗಂಭೀರ ದೂಷಣೆಗಳನ್ನು ಹೊರಿಸಿ ಸಮಾಜದಲ್ಲಿ ಮರ್ಯಾದೆ ಕಳೆಯುವುದಾಗಿ ಬೆದರಿಸಿ ಹಣ ಹಾಗೂ ಸ್ಥಿರಾಸ್ತಿಯನ್ನು ಕಬಳಿಸಲು ಸಂಚು ಹೂಡಿದ್ದ ವ್ಯಕ್ತಿಯೊಬ್ಬನನ್ನು ಉರ್ವಾ ಠಾಣೆಯ ಪೊಲೀಸರು ಸೆರೆಹಿಡಿದಿದ್ದಾರೆ.
ಕಳೆದ ಆಗಸ್ಟ್ 10 ರಂದು ಮಾಯಾ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಕುಟುಂಬದ ಹೆಸರಿಗೆ ಮಸಿ ಬಳಿದು ಹೆದರಿಸಿ ಹಣ ಹಾಗೂ ಆಸ್ತಿ ಲಪಟಾಯಿಸಲು ದೊಡ್ಡ ಮಟ್ಟದ ಪಿತೂರಿ ನಡೆಸಲಾಗಿದೆ ಎಂದು ದೂರಿನಲ್ಲಿ ಗಂಭೀರವಾಗಿ ವಿವರಿಸಲಾಗಿತ್ತು.
ಈ ದೂರಿನ ಮೇರೆಗೆ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದ ಅಧಿಕಾರಿಗಳು, ಶಕ್ತಿನಗರದ ಪದವು ಗಣಮಜಲ್ ನಿವಾಸಿ ನವೀನ್ ಥೋರ್ಸ್ (42) ಎಂಬಾತನನ್ನು ಅಕ್ಟೋಬರ್ ೨೩ರಂದು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 24ರಂದು ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಈ ಕೃತ್ಯದ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಕೋನದಲ್ಲಿ ತನಿಖೆ ತೀವ್ರಗೊಳಿಸಲಾಗಿದ್ದು, ಸಾಕ್ಷ್ಯಾಧಾರಗಳ ಅನ್ವಯ ಮುಂದಿನ ಹಂತದ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









