ಮಂಗಳೂರು : ವಿದ್ಯಾರ್ಥಿಗಳ ಸುರಕ್ಷತೆಯನ್ನೇ ಗಾಳಿಗೆ ತೂರಿ, ನಿಯಮಾವಳಿಗಳನ್ನು ಮೀರಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ವಾಹನಗಳಿಗೆ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಶಾಲಾ ಮಕ್ಕಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಆರ್ಟಿಒ ಸಿಬ್ಬಂದಿಗಳು ನಗರಾದ್ಯಂತ ದಿಢೀರ್ ಕಾರ್ಯಚರಣೆ ನಡೆಸಿ, ನಿಯಮ ಉಲ್ಲಂಘಿಸಿದ ವಾಹನಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ವಿಶೇಷ ತಪಾಸಣೆ ವೇಳೆ ನಿಯಮಬಾಹಿರವಾಗಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಒಟ್ಟು 30 ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ನಿಮ್ಮ ವಾಹನಗಳ ನೋಂದಣಿಯನ್ನು (ಆರ್ಸಿ) ಏಕಾಗಿ ಅಮಾನತುಗೊಳಿಸಬಾರದು ಎಂಬ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ವಾಹನ ಮಾಲೀಕರಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಲಾಗಿದೆ.
ಖಾಸಗಿ ವಾಹನಗಳಲ್ಲಿ ಮಿತಿಮೀರಿ ಮಕ್ಕಳನ್ನು ಸಾಗಿಸುವುದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಮಂಗಳೂರು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಂಬರುವ ದಿನಗಳಲ್ಲೂ ಸಹ ಇಂತಹ ವಾಹನಗಳ ವಿರುದ್ಧ ನಿರಂತರ ತಪಾಸಣೆ ಹಾಗೂ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









