ಮಂಗಳೂರು: ರಾಷ್ಟ್ರಪ್ರೇಮ ಅಥವಾ ‘ಭಾರತ್ ಮಾತಾ ಕೀ ಜೈ’ ಎನ್ನುವ ಘೋಷಣೆಗಳನ್ನು ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ ಗುರಾಣಿಯಾಗಿ ಬಳಸಿಕೊಂಡು ಕಾನೂನು ಉಲ್ಲಂಘಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ‘ಭಾರತ್ ಮಾತಾ ಕೀ ಜೈ’ ಎಂದಿದ್ದಕ್ಕಾಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಹಾಗೂ ಪ್ರತಿಭಟನಾಕಾರರಿಂದ ಬಾಂಡ್ ಪಡೆಯಲು ಯತ್ನಿಸಿದ್ದಾರೆ ಎಂಬ ಬಿಜೆಪಿ ಮತ್ತು ಎಬಿವಿಪಿ ನಾಯಕರ ಆರೋಪಗಳಿಗೆ ಅವರು ಸೂಕ್ತ ಸ್ಪಷ್ಟನೆ ನೀಡಿದ್ದಾರೆ. ಖಾಕಿ ಸಮವಸ್ತ್ರ ಧರಿಸುವಾಗಲೇ ತಾವು ದೇಶದ ರಕ್ಷಣೆಗೆ ಬದ್ಧರಾಗಿರುವುದಾಗಿ ಹೇಳಿದ ಅವರು, ದೇಶಪ್ರೇಮದ ನೆಪದಲ್ಲಿ ಕಾನೂನುಬಾಹಿರ ಕೃತ್ಯಗಳನ್ನು ನಡೆಸಲು ಯಾರಿಗೂ ಅವಕಾಶವಿಲ್ಲ ಎಂದು ತಿಳಿಸಿದರು.
ಅಧಿಕೃತ ಪ್ರಕಟಣೆ ಹೊರಡಿಸಿರುವ ಕಮಿಷನರ್, ದೇಶದ ಪರ ಘೋಷಣೆ ಕೂಗುವ ಮೂಲಕ ತಾವು ಮಾಡಿದ ಅಕ್ರಮಗಳನ್ನು ಮರೆಮಾಚಿ ಸಾರ್ವಜನಿಕರನ್ನು ದಾರಿ ತಪ್ಪಿಸಲು ಯತ್ನಿಸುವುದು ದೇಶಕ್ಕೆ ಗೌರವ ತರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು ವಿಧಿಸಿದ್ದರೇ ಹೊರತು ಪ್ರತಿಭಟನೆಗೆ ತಡೆ ನೀಡಿರಲಿಲ್ಲ. ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂಚಿತವಾಗಿ ಯಾವುದೇ ಅಧಿಕೃತ ಅನುಮತಿ ಪಡೆಯದಿದ್ದರೂ, ಅವರ ಭವಿಷ್ಯವನ್ನು ಪರಿಗಣಿಸಿ ಯಾವುದೇ ಕಠಿಣ ಕ್ರಮ ಜರುಗಿಸಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.
ಆದರೆ, ಸ್ಥಳೀಯರಲ್ಲದ ಹೊರಗಿನ ವ್ಯಕ್ತಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದಾಗ ಮತ್ತು ಕಾಲೇಜು ಆಡಳಿತ ಮಂಡಳಿಯಿಂದ ದೂರು ಬಂದಾಗ ಪೊಲೀಸರು ಮಧ್ಯಪ್ರವೇಶಿಸುವುದು ಅನಿವಾರ್ಯವಾಯಿತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಭೀತಿಯಿಂದ ಕೆಲವರನ್ನು ವಶಕ್ಕೆ ಪಡೆದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಮುನ್ನೆಚ್ಚರಿಕೆಯಾಗಿ ಬಾಂಡ್ ನೀಡುವಂತೆ ಸೂಚಿಸಲಾಗಿತ್ತು. ಆದಾಗ್ಯೂ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಂತಿಮವಾಗಿ ಯಾವುದೇ ಬಾಂಡ್ ಪಡೆಯದೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









