ಉಡುಪಿ : ಮಣಿಪಾಲದ ವಿದ್ಯಾರತ್ನ ನಗರದ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 26 ವರ್ಷದ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 24 ರಂದು ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ತನಿಖೆ) ಶಂಭುಲಿಂಗಯ್ಯ ಎಂ.ಇ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಉಡುಪಿಯ ಕಿನ್ನಿಮುಲ್ಕಿ ನಿವಾಸಿ ಮೊಹಮ್ಮದ್ ಪರ್ವೇಜ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯಿಂದ 20 ಇಂಚು ಉದ್ದದ ನೀಲಿ ಹಿಡಿಕೆಯ ಮಚ್ಚು ಹಾಗೂ 16 ಇಂಚು ಉದ್ದದ ಹಸಿರು ಹಿಡಿಕೆಯ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಉಡುಪಿ ನಗರ, ಶಿರ್ವ, ಸಿಇಎನ್ ಪೊಲೀಸ್ ಠಾಣೆಗಳು ಮತ್ತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ದಾವೂದ್, ಇಸಾಕ್ ಹಾಗೂ ಗರುಡ ಗ್ಯಾಂಗ್ಗಳ ಜೊತೆ ತನಗಿದ್ದ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಲು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಂಚರಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ. ಆಯುಧಗಳನ್ನು ಜಪ್ತಿ ಮಾಡಿರುವ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









