ಮಂಗಳೂರು : ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಪ್ರಸ್ತುತ ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ರಾಜಧಾನಿ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ. ಈ ಮಹತ್ವದ ನಿರ್ಧಾರದ ಕುರಿತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಧಿಕೃತ ಪತ್ರ ಬರೆಯುವ ಮೂಲಕ ಖಾತರಿಪಡಿಸಿದ್ದಾರೆ.
ಬೆಂಗಳೂರು ಹಾಗೂ ಕರಾವಳಿ ಪ್ರದೇಶಗಳ ನಡುವಿನ ಪ್ರಯಾಣದ ಸಮಯ ತಗ್ಗಿಸಲು ಹೊಸ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ನಿರಂತರವಾಗಿ ಶ್ರಮಿಸಿದ್ದರು. ಅವರು 2025ರ ನವೆಂಬರ್ 12, 2026ರ ಜೂನ್ 6 ಹಾಗೂ 2026ರ ಆಗಸ್ಟ್ 10 ರಂದು ಕೇಂದ್ರ ಸಚಿವರಿಗೆ ಹಂತ-ಹಂತವಾಗಿ ಮನವಿ ಪತ್ರಗಳನ್ನು ಸಲ್ಲಿಸಿ ರೈಲು ವಿಸ್ತರಣೆಗೆ ಒತ್ತಾಯಿಸಿದ್ದರು. ಸಂಸದರ ಈ ಸತತ ಶ್ರಮ ಮತ್ತು ಮನವಿಗೆ ಕೇಂದ್ರ ರೈಲ್ವೆ ಸಚಿವಾಲಯವೀಗ ಧನಾತ್ಮಕವಾಗಿ ಸ್ಪಂದಿಸಿದೆ.
ಅನುಮೋದನೆಗೊಂಡ ಪರಿಷ್ಕೃತ ಯೋಜನೆಯ ಪ್ರಕಾರ, ಈ ಸೂಪರ್ಫಾಸ್ಟ್ ರೈಲು ಇನ್ಮುಂದೆ ಉಡುಪಿ, ಕುಂದಾಪುರ ಹಾಗೂ ಕಾರವಾರ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ. ನೂತನ ಸೇವೆಯು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲು ಸಂಖ್ಯೆ 26655/26656 “ಯಶವಂತಪುರ – ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್” ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









