ಮಂಗಳೂರು : ಕರಾವಳಿ ಹಾಗೂ ರಾಜಧಾನಿ ಬೆಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇರಿದಂತೆ ಹಲವು ಮಹತ್ವದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಮಂಗಳೂರಿಗೆ ಆಗಮಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವರನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತುಳುನಾಡಿನ ಸಾಂಪ್ರದಾಯಿಕ ಚಂಡೆ ವಾದ್ಯದ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ತಮ್ಮ ಈ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಅಶ್ವಿನಿ ವೈಷ್ಣವ್ ಅವರು, ಶುಕ್ರವಾರ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನೂತನ ವಂದೇ ಭಾರತ್ ಹೈಸ್ಪೀಡ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದರೊಂದಿಗೆ ಕರಾವಳಿ ಮತ್ತು ಮಲೆನಾಡು ಭಾಗದ ಜನರ ದಶಕಗಳ ಬೇಡಿಕೆಯಾದ ಮೂರು ಪ್ರಮುಖ ರೈಲ್ವೆ ಯೋಜನೆಗಳು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಈ ಭೇಟಿಯು ಜಿಲ್ಲೆಯ ರೈಲು ಸಂಪರ್ಕ ಜಾಲದ ಬಲವರ್ಧನೆ, ವಾಣಿಜ್ಯ, ಪ್ರವಾಸೋದ್ಯಮ ಮತ್ತು ದೈನಂದಿನ ಪ್ರಯಾಣಿಕರ ಅನುಕೂಲಕ್ಕೆ ಹೊಸ ವೇಗ ನೀಡಲಿದ್ದು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಭಾಷ್ಯ ಬರೆಯುವ ನಿರೀಕ್ಷೆಯಿದೆ.
ನಾಳೆ ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳಲ್ಲಿ ಪ್ರಮುಖವಾಗಿ ಮಂಗಳೂರು ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಿ ವೇಗದ ಹಾಗೂ ಆಧುನಿಕ ಪ್ರಯಾಣದ ಅನುಭವ ನೀಡುವ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲು ಸೇವೆಗೆ ಚಾಲನೆ ದೊರೆಯಲಿದೆ. ಇದರೊಂದಿಗೆ ಪಶ್ಚಿಮ ಘಟ್ಟದ ಅತ್ಯಂತ ಸವಾಲಿನ ಮಾರ್ಗವಾದ ಸುಬ್ರಹ್ಮಣ್ಯ ರಸ್ತೆ ಮತ್ತು ಸಕಲೇಶಪುರ ನಡುವಿನ ಪೂರ್ಣಗೊಂಡಿರುವ ರೈಲ್ವೆ ಹಳಿ ವಿದ್ಯುದ್ದೀಕರಣ ಕಾಮಗಾರಿಯು ಲೋಕಾರ್ಪಣೆಯಾಗಲಿದ್ದು, ಘಾಟ್ ಸೆಕ್ಷನ್ನಲ್ಲಿ ರೈಲುಗಳ ವೇಗ ಮತ್ತು ಸಾಮರ್ಥ್ಯ ಹೆಚ್ಚಾಗಲಿದೆ. ಅಲ್ಲದೆ, ಕೇಂದ್ರದ ‘ಅಮೃತ್ ಭಾರತ್ ನಿಲ್ದಾಣ’ ಯೋಜನೆಯಡಿ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಣಗೊಂಡಿರುವ ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣವೂ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ.
ಶುಕ್ರವಾರದ ಪ್ರವಾಸದ ಅಂಗವಾಗಿ ಸಚಿವರು ಬೆಳಗ್ಗೆ 8:00 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಲಿದ್ದಾರೆ. ಬಳಿಕ ಬೆಳಗ್ಗೆ 10:30ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಬೆಳಗ್ಗೆ 11:30ಕ್ಕೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧ್ಯಾಹ್ನ 12:00 ಗಂಟೆಗೆ ಪ್ರಧಾನಮಂತ್ರಿಗಳ ವರ್ಚುವಲ್ ಸಮ್ಮುಖದಲ್ಲಿ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ಮಧ್ಯಾಹ್ನ 1:30ಕ್ಕೆ ಅದೇ ನೂತನ ವಂದೇ ಭಾರತ್ ರೈಲಿನ ಮೂಲಕ ಸಚಿವರು ಸುಬ್ರಹ್ಮಣ್ಯದತ್ತ ಪ್ರಯಾಣ ಬೆಳೆಸಲಿದ್ದಾರೆ.
ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗಮಧ್ಯೆ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ನಿಲುಗಡೆಗೊಳ್ಳಲಿರುವ ಸಚಿವರು, ಸ್ಥಳೀಯರು, ಪ್ರಯಾಣಿಕರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ತದನಂತರ ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಕ್ಕೆ ತಲುಪಿ, ನೂತನವಾಗಿ ಲೋಕಾರ್ಪಣೆಗೊಂಡ ‘ಅಮೃತ್ ಭಾರತ್’ ನಿಲ್ದಾಣದ ಕಟ್ಟಡ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಖುದ್ದು ವೀಕ್ಷಿಸಲಿದ್ದಾರೆ. ಬಳಿಕ ಮಂಗಳೂರಿಗೆ ವಾಪಸಾಗಿ ಸಂಜೆ 4:00 ಗಂಟೆಗೆ ಐತಿಹಾಸಿಕ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನವದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









