ಮಂಗಳೂರು: ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿಯಲ್ಲಿ ಸಣ್ಣ ಉದ್ಯಮಿಗಳು ತಯಾರಿಸುವ ಗುಡಿ ಕೈಗಾರಿಕೆ ಹಾಗೂ ಗೃಹ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರಿಗೆ ಬೆಂಬಲ ನೀಡಬೇಕು ಮತ್ತು ಈ ಮೂಲಕ ಸಪ್ತಾಹದ ಸಂತೆಯನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಕರೆ ನೀಡಿದರು. ಸೋಮವಾರ ನಗರದ ವಿ.ಟಿ. ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಪ್ರಾಯೋಜಕತ್ವ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಸಹಕಾರ ಹಾಗೂ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಶ್ರಯದಲ್ಲಿ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಸಪ್ತಾ ಸಾಂತ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ 104ನೇ ವರ್ಷದ ಅಖಂಡ ಭಜನಾ ಸಪ್ತಾಹದ ಸಂದರ್ಭದಲ್ಲಿ ಹಿಂದೆ ವಿ.ಟಿ. ರಸ್ತೆಯ ಇಕ್ಕೆಲಗಳಲ್ಲಿ ಸಂತೆ ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಆದರೆ ಪ್ರಸ್ತುತ ಹೆಚ್ಚುತ್ತಿರುವ ವಾಹನ ದಟ್ಟಣೆಯ ಕಾರಣದಿಂದ ಸಂತೆಯನ್ನು ಕಲ್ಯಾಣ ಮಂಟಪದ ಒಳಾಂಗಣದಲ್ಲಿ ಆಯೋಜಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಪ್ರತಿ ವರ್ಷದಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದು, ಗೃಹ ತಯಾರಿಕೆಯ ಖಾದ್ಯಗಳು, ವಸ್ತ್ರಗಳು ಮತ್ತು ವಿವಿಧ ಅಲಂಕಾರಿಕ ಸಾಮಗ್ರಿಗಳು ಗಮನ ಸೆಳೆಯುತ್ತಿವೆ; ಇದಕ್ಕೆ ಸಾರ್ವಜನಿಕರಿಂದ ಸಿಗುತ್ತಿರುವ ಉತ್ತಮ ಸ್ಪಂದನೆಯು ಉದ್ಯಮಿಗಳು ಹಾಗೂ ಗ್ರಾಹಕರಿಬ್ಬರಿಗೂ ಪ್ರಯೋಜನಕಾರಿಯಾಗಿದೆ ಎಂದು ಶ್ಲಾಘಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್, ದೇವಳದ ಟ್ರಸ್ಟಿ ವಿಠೋಭ ಶೆಣೈ ಹಾಗೂ ಪ್ರಮುಖರಾದ ನಾಗೇಶ್ ಪ್ರಭು ಪಾಲ್ಗೊಂಡಿದ್ದರು. ಸಾರ್ವಜನಿಕರ ವೀಕ್ಷಣೆ ಮತ್ತು ಖರೀದಿಗಾಗಿ ಈ ಸಂತೆಯು ಪ್ರತಿದಿನ ಬೆಳಿಗ್ಗೆ 9.30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರಲಿದ್ದು, ನವೆಂಬರ್ 21ರ ರಾತ್ರಿ 8 ಗಂಟೆಗೆ ಸಮಾಪನಗೊಳ್ಳಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









