
ಮಂಗಳೂರು : ಗಾನನೃತ್ಯ ಅಕಾಡೆಮಿ (ರಿ.) ಮಂಗಳೂರು ಇದರ ಆಶ್ರಯದಲ್ಲಿ ಮತ್ತು ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಕುಮಾರಿ ಶ್ರಾವಣಿ ಕೆ. ಭಟ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮಂಗಳೂರಿನಲ್ಲಿರುವ ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಈ ಸಾಂಸ್ಕೃತಿಕ ಮಹೋತ್ಸವವು ನೆರವೇರಿತು.
ಈ ಭವ್ಯ ಕಾರ್ಯಕ್ರಮದಲ್ಲಿ ನೃತ್ಯ ನಿಕೇತನ ಉಡುಪಿಯ ನಿರ್ದೇಶಕರಾದ ಶ್ರೀಮತಿ ಗುರು ಲಕ್ಷ್ಮಿ ಗುರುರಾಜ್ ಅವರು ದೀಪ ಬೆಳಗಿಸಿ ಗೌರವಾನ್ವಿತ ಉಪಸ್ಥಿತಿಯನ್ನು ವಹಿಸಿದ್ದರು. ಹಾಗೆಯೇ ಜಾರಿ ನಿರ್ದೇಶನಾಲಯದ ವಕೀಲರು ಹಾಗೂ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ಮಹೇಶ್ ಕಜೆ ಅವರು ಅತಿಥಿಯಾಗಿ ಭಾಗವಹಿಸಿದ್ದರು.
ರಂಗಪ್ರವೇಶದ ಯಶಸ್ವಿ ಹಿಮ್ಮೇಳದಲ್ಲಿ ನಟ್ಟುವಾಂಗವನ್ನು ಗುರು ವಿದ್ಯಾಶ್ರೀ ರಾಧಾಕೃಷ್ಣ (ಮಂಗಳೂರು) ನಡೆಸಿಕೊಟ್ಟರೆ, ಗಾಯನವನ್ನು ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ (ಚೆನ್ನೈ), ಮೃದಂಗವನ್ನು ವಿದ್ವಾನ್ ವಿನಯ್ ನಾಗರಾಜನ್ (ಬೆಂಗಳೂರು), ವೀಣೆಯನ್ನು ವಿದ್ವಾನ್ ಸೌಂದರ ರಾಜನ್ (ತಿರುವನಂತಪುರ) ಹಾಗೂ ಕೊಳಲನ್ನು ವಿದ್ವಾನ್ ನಿತೇಶ್ ಅಮ್ಮಣ್ಣಾಯ ಅವರು ಒದಗಿಸಿದರು.
ಗುಜರಾತ್ನ ವಾಪಿ ಎಂಬಲ್ಲಿ ಜನಿಸಿರುವ ಶ್ರಾವಣಿ ಕೆ. ಭಟ್ ಅವರು, ಕದ್ರಿಯ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ವಂಶಸ್ಥರಾದ ಶ್ರೀ ಕೆ. ಅನಂತಭಟ್ ಹಾಗೂ ಸರಸ್ವತಿ ದಂಪತಿಗಳ ಮೊಮ್ಮಗಳು ಹಾಗೂ ಶ್ರೀ ಕೆ. ಕೃಷ್ಣ ಭಟ್ ಮತ್ತು ಶ್ರೀಮತಿ ಪ್ರೀತಿ ಕೆ. ದಂಪತಿಯ ಮುದ್ದಿನ ಪುತ್ರಿಯಾಗಿದ್ದಾರೆ. ಇವರು ಪ್ರಸ್ತುತ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಪದವಿಯ ಮೂರನೇ ವರ್ಷದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.

ತಮ್ಮ ಎಂಟನೇ ವಯಸ್ಸಿನಿಂದಲೇ ನಾಟ್ಯಾಭ್ಯಾಸವನ್ನು ಕೈಗೊಂಡಿರುವ ಇವರು, ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇದರೊಂದಿಗೆ ವಿದ್ವತ್ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಇವರು, ಸಂಗೀತ ಕ್ಷೇತ್ರದ ಒಲವಿನಿಂದ ಕರ್ನಾಟಕ ಸಂಗೀತದಲ್ಲೂ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು ಪೂರ್ಣಗೊಳಿಸಿ ತಮ್ಮ ಕಲಾಸಕ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಶ್ರಾವಣಿ ಅವರು, ಶ್ರೀಕೇತೃ ಚಕ್ರಪಾಣಿ ಗೋಪಿನಾಥ ದೇವಸ್ಥಾನ, ಶಾರದಾ ಮಹೋತ್ಸವ, ಬಿಎಸ್ಕೆಬಿಎಸ್ ಅಸೋಸಿಯೇಷನ್ ಹಾಗೂ ಮುಂಬೈನ ಗೋಕುಲ್ ಸೆಂಟರ್ ಆಫ್ ಕಲ್ಚರಲ್ ಎಜ್ಯುಕೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಥಮ ಸ್ಥಾನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದು ಕೀರ್ತಿ ತಂದಿದ್ದಾರೆ.
ನೃತ್ಯವನ್ನು ಕೇವಲ ಕಲೆಯಾಗಿ ನೋಡದೆ ದೇವಸೇವೆಯ ರೂಪದಲ್ಲೂ ಆಳವಡಿಸಿಕೊಂಡಿರುವ ಶ್ರಾವಣಿ ಅವರು ಕಟೀಲು, ಮಂಗಳಾದೇವಿ, ಕೊಲ್ಲೂರು ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಸಿದ್ಧ ದೇವಾಲಯಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ವೈಭವ್ ಅರೆಕರ್, ಪ್ರವೀಣ್ ಕುಮಾರ್ ಸೇರಿದಂತೆ ಖ್ಯಾತ ಕಲಾವಿದರ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ತಮ್ಮ ನೃತ್ಯ ನೈಪುಣ್ಯತೆಯನ್ನು ಮತ್ತಷ್ಟು ಮೆರುಗಾಗಿಸಿಕೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









