ಮಂಗಳೂರು : ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದಕ್ಷಿಣ ಕನ್ನಡ, ಪಡಿ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಲಯನ್ಸ್ ಕ್ಲಬ್, ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಂಟಿ ಆಶ್ರಯದಲ್ಲಿ 2026ನೇ ಸಾಲಿನ ‘ಮಕ್ಕಳ ಹಕ್ಕುಗಳ ಮಾಸೋತ್ಸವ’ ಹಾಗೂ ‘ಮಕ್ಕಳ ಸಂಸತ್ತು-2026’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೆಆರ್ಸಿಯ ಬಾಲ್ಯವಿವಾಹ ನಿಷೇಧ ಕುರಿತ ಜಾಗೃತಿ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು, “ಮಕ್ಕಳು ಸಮಾಜದ ಅತಿ ಅಮೂಲ್ಯವಾದ ಮುತ್ತುಗಳಿದ್ದಂತೆ. ಮಕ್ಕಳಿಗೆ ತಮ್ಮ ಹಕ್ಕುಗಳು ಸಿಗದಿದ್ದಲ್ಲಿ ಅಥವಾ ಸಮಸ್ಯೆಗಳು ಎದುರಾದಾಗ ಧೈರ್ಯವಾಗಿ ಧ್ವನಿ ಎತ್ತಬೇಕು,” ಎಂದು ಕರೆ ನೀಡಿದರು. ಅಲ್ಲದೆ, ಇಂದಿನ ನವಪೀಳಿಗೆಯ ಮಕ್ಕಳು ಮೊಬೈಲ್ ಗೇಮಿಂಗ್ ಚಟಕ್ಕೆ ಬಲಿಯಾಗಿ ತಮ್ಮ ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.
ಮಕ್ಕಳ ಹಕ್ಕುಗಳ ಜಾಗೃತಿ ಭಿತ್ತಿಪತ್ರ ಹಾಗೂ ಬಾಲ್ಯವಿವಾಹ ನಿಷೇಧ ಫಲಕಗಳನ್ನು ಮಕ್ಕಳ ಕೈಯಿಂದಲೇ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಲಾಯಿತು. ದ.ಕ. ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿಯ ಸಂಚಾಲಕಿ ಶ್ರೀಮತಿ ವನಿತಾ ಅರುಣ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ವಿಲ್ಮಾ, ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಕೆ.ಎಮ್., ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ. ಅಕ್ಷತಾ ಆದರ್ಶ ಹಾಗೂ ಲಯನ್ಸ್ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.
ಸಂಜೆ ನಡೆದ ‘ಮಕ್ಕಳ ಸಂಸತ್ತು’ ಕಲಾಪದಲ್ಲಿ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ದೇವದಾಸ್ ಕೆ. ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿ ಸಂವಾದ ನಡೆಸಿದರು. ಮುಂಬರುವ ನವೆಂಬರ್ 20 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ಸಂಸತ್ ಕಾರ್ಯಕ್ರಮಕ್ಕೆ ಮಂಗಳೂರಿನ ಸ್ನೇಹ ಸದನದ ಶ್ರವಣ್ ಹಾಗೂ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ನ ಶ್ರೀವಿದ್ಯಾ ಅವರನ್ನು ಆಯ್ಕೆ ಮಾಡಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









